ಅಮೆರಿಕದಲ್ಲಿ ವಾಸವಿದ್ದ ಕೇರಳ ಮೂಲದ ದಂಪತಿ ಹಾಗೂ ಅವರ ಅವಳಿ ಮಕ್ಕಳು ಶವ ಪತ್ತೆಯಾಗಿದ್ದು ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ.
ಆನಂದ್ ಸುಜಿತ್ ಹೆನ್ರಿ , ಪತ್ನಿ ಆಲಿಸ್ ಪ್ರಿಯಾಂಕಾ 4 ವರ್ಷದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಸಂಬಂಧಿಕರು ಕರೆ ಮಾಡಿದಾಗ ರಿಸೀವ್ ಮಾಡದ ಕಾರಣ ಮನೆಗೆ ಬಂದು ನೋಡಿದ್ದು ಈ ವೇಳೆ ನಾಲ್ವರ ಶವಗಳು ಪತ್ತೆಯಾಗಿದೆ. ಪೊಲೀಸರು ಮನೆಗೆ ಬಂದು ತಪಾಸಣೆ ನಡೆಸಿದಾಗ ದಂಪತಿ ಶವ ಬಾತ್ ರೂಮ್ನಲ್ಲಿ ಕಂಡುಬಂದಿದ್ದು, ಇಬ್ಬರು ಮಕ್ಕಳ ಶವ ಕೋಣೆಯಲ್ಲಿ ಪತ್ತೆಯಾಗಿದೆ.
ದಂಪತಿ ಮೈಮೇಲೆ ಗುಂಡಿನ ಗುರುತುಗಳಿದ್ದವು, ಮನೆಯಲ್ಲಿ ಯಾರೋ ಅಪರಿಚಿತರು ಬಂದಿರುವ ಯಾವುದೇ ಲಕ್ಷಣಗಳಿರಲಿಲ್ಲ. ಆದರೆ ಕಿಟಕಿ ತೆರೆದಿತ್ತು ಅಲ್ಲಿಂದ ಯಾರಾದರೂ ಮನೆಯ ಒಳಗೆ ಬಂದಿದ್ದರೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಬಾತ್ರೂಮ್ನಿಂದ 9 ಎಂಎಂ ಪಿಸ್ತೂಲ್ ಮತ್ತು ಲೋಡ್ ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ 9 ವರ್ಷಗಳಿಂದ ದಂಪತಿ ಅಮೆರಿಕದಲ್ಲಿ ವಾಸವಾಗಿದ್ದರು. ಸಾಫ್ಟ್ವೇರ್ ಎಂಜಿನಿಯರ್ ಆನಂದ್ ಮತ್ತು ಹಿರಿಯ ವಿಶ್ಲೇಷಕ ಆಲಿಸ್ ಎರಡು ವರ್ಷಗಳ ಹಿಂದೆ ನ್ಯೂಜೆರ್ಸಿಯಿಂದ ಸ್ಯಾನ್ ಮ್ಯಾಟಿಯೊ ಕೌಂಟಿಗೆ ಸ್ಥಳಾಂತರಗೊಂಡಿದ್ದರು.
ನ್ಯಾಯಾಲಯದ ದಾಖಲೆ ಪ್ರಕಾರ ಆನಂದ್ ಡಿಸೆಂಬರ್ 2016ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಅದಲ್ಲಿಗೇ ನಿಂತಿತ್ತು. ಸ್ಯಾನ್ ಮ್ಯಾಟಿಯೊ ಕೌಂಟಿಯ ಕ್ರಿಮಿನಲ್ ಇನ್ವೆಸ್ಟಿಗೇಷನ್ ಬ್ಯೂರೋ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಮೃತದೇಹಗಳನ್ನು ಸ್ಯಾನ್ ಮ್ಯಾಟಿಯೊ ಕೌಂಟಿ ಕರೋನರ್ ಅವರ ವಶಕ್ಕೆ ತೆಗೆದುಕೊಳ್ಳಲಾಗಿದೆ.