ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗಾಗಿ ಪ್ರಕಟಿಸಲಾದ ಭಾರತ ತಂಡದಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಸ್ಥಾನ ಪಡೆದಿದ್ದಾರೆ. ಆದರೆ ಈ ಟೂರ್ನಿಗೂ ಮುನ್ನ ಫಿಟ್ನೆಸ್ ಸಾಬೀತುಪಡಿಸುವಂತೆ ಶ್ರೇಯಾಂಕಾಗೆ ಬಿಸಿಸಿಐ ಸೂಚಿಸಿದೆ. ಏಷ್ಯಾಕಪ್ ವೇಳೆ ಗಾಯಗೊಂಡಿದ್ದ ಕನ್ನಡತಿ ಬಳಿಕ ಟೀಮ್ ಇಂಡಿಯಾ ಪರ ಕಣಕ್ಕಿಳಿದಿರಲಿಲ್ಲ. ಹೀಗಾಗಿ ಟಿ20 ವಿಶ್ವಕಪ್ಗೂ ಮುನ್ನ ಫಿಟ್ನೆಸ್ ಸಾಬೀತುಪಡಿಸಲು ಸೂಚಿಸಲಾಗಿದೆ.ಅಕ್ಟೋಬರ್ 3 ರಿಂದ ಶುರುವಾಗಲಿರುವ ಮಹಿಳಾ ಟಿ20 ವಿಶ್ವಕಪ್ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಬಳಗವನ್ನು ಹರ್ಮನ್ಪ್ರೀತ್ ಕೌರ್ ಮುನ್ನಡೆಸಲಿದ್ದು, ಉಪನಾಯಕಿಯಾಗಿ ಸ್ಮೃತಿ ಮಂಧಾನ ಕಾಣಿಸಿಕೊಳ್ಳಲಿದ್ದಾರೆ.
ಈ ತಂಡದಲ್ಲಿ ಕರ್ನಾಟಕದ ಯುವ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಸ್ಥಾನ ಪಡೆದಿದ್ದು, ಅದಕ್ಕೂ ಮುನ್ನ ಅವರು ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ಇದೆ. ಕಳೆದ ಏಷ್ಯಾಕಪ್ ಟೂರ್ನಿಯ ವೇಳೆ ಶ್ರೇಯಾಂಕಾ ಗಾಯಗೊಂಡಿದ್ದರು. ಇದಾದ ಬಳಿಕ ಅವರು ಟೀಮ್ ಇಂಡಿಯಾ ಪರ ಯಾವುದೇ ಪಂದ್ಯವಾಡಿಲ್ಲ. ಹೀಗಾಗಿ ಫಿಟ್ನೆಸ್ ಸಾಬೀತುಪಡಿಸಲು ಸೂಚಿಸಲಾಗಿದೆ.
ಹಾಗೆಯೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿರುವ ಯಾಸ್ತಿಕಾ ಭಾಟಿಯಾ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಅವರ ಸಹ ಫಿಟ್ನೆಸ್ ಟೆಸ್ಟ್ಗೆ ಒಳಗಾಗಬೇಕಿದೆ. ಇನ್ನು ಈ ತಂಡದಲ್ಲಿ ವೇಗಿಗಳಾಗಿ ಪೂಜಾ ವಸ್ತ್ರಾಕರ್ ಹಾಗೂ ರೇಣುಕಾ ಸಿಂಗ್ ಠಾಕೂರ್ ಸ್ಥಾನ ಪಡೆದಿದ್ದು, ಸ್ಪಿನ್ನರ್ಗಳಾಗಿ ರಾಧಾ ಯಾದವ್ ಮತ್ತು ಆಶಾ ಸೋಭಾನ ಕಾಣಿಸಿಕೊಂಡಿದ್ದಾರೆ.
ಭಾರತ ಟಿ20 ತಂಡ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್)*, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ , ರೇಣುಕಾ ಸಿಂಗ್ ಠಾಕೂರ್, ದಯಾಳನ್ ಹೇಮಲತಾ, ಆಶಾ ಸೋಭಾನ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್*, ಸಜನಾ ಸಜೀವನ್. ಮೀಸಲು ಆಟಗಾರ್ತಿಯರು: ಉಮಾ ಚೆಟ್ರಿ, ತನುಜಾ ಕನ್ವರ್ ಮತ್ತು ಸೈಮಾ ಠಾಕೂರ್.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅಕ್ಟೋಬರ್ 3 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ಹಾಗೂ ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಭಾರತ ತಂಡವು ಅಕ್ಟೋಬರ್ 4 ರಂದು ನ್ಯೂಝಿಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಭಾರತದ ಟಿ20 ವಿಶ್ವಕಪ್ ಪಂದ್ಯಗಳ ವೇಳಾಪಟ್ಟಿ:
- ಅಕ್ಟೋಬರ್ 4, ಶುಕ್ರವಾರ: ಭಾರತ vs ನ್ಯೂಝಿಲೆಂಡ್, ದುಬೈ
- ಅಕ್ಟೋಬರ್ 6, ಭಾನುವಾರ: ಭಾರತ vs ಪಾಕಿಸ್ತಾನ, ದುಬೈ
- ಅಕ್ಟೋಬರ್ 9, ಬುಧವಾರ: ಭಾರತ vs ಶ್ರೀಲಂಕಾ, ದುಬೈ
- ಅಕ್ಟೋಬರ್ 13, ಭಾನುವಾರ: ಭಾರತ vs ಆಸ್ಟ್ರೇಲಿಯಾ, ಶಾರ್ಜಾ
ಅಕ್ಟೋಬರ್ 17 ರಂದು ಮೊದಲ ಸೆಮಿಫೈನಲ್ ನಡೆಯಲಿದ್ದು, 18 ರಂದು ಎರಡನೇ ಸೆಮಿಫೈನಲ್ ಜರುಗಲಿದೆ. ಹಾಗೆಯೇ ಅಕ್ಟೋಬರ್ 20 ರಂದು ಫೈನಲ್ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂ ಆತಿಥ್ಯವಹಿಸಲಿದೆ