ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ಮುಂಬರುವ ಅಮೆರಿಕ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಉತ್ತಮ ‘ಸ್ನೇಹಿತ’ ಮತ್ತು ‘ಒಳ್ಳೆಯ ಮನುಷ್ಯ’ ಎಂದಿದ್ದಾರೆ.
‘ಭಾರತದ ಮೋದಿ ನನ್ನ ಸ್ನೇಹಿತ ಮತ್ತು ಒಳ್ಳೆಯ ಮನುಷ್ಯ. ಅವರು ಪ್ರಧಾನಿಯಾಗಿ ನೇಮಕಗೊಳ್ಳುವ ಮೊದಲು ಭಾರತವು ತುಂಬಾ ಅಸ್ಥಿರತೆಯಿಂದ ಕೂಡಿತ್ತು. ಹೊರನೋಟಕ್ಕೆ ಅವರು ನಿಮ್ಮ ತಂದೆಯಂತೆ ಆಪ್ತರಾಗಿ ಕಾಣುತ್ತಾರೆ. ಅವರು ಉತ್ತಮ ಮನುಷ್ಯ’ ಎಂದು ಟ್ರಂಪ್ ಮೋದಿಯನ್ನು ಹೊಗಳಿದ್ದಾರೆ.
2019ರಲ್ಲಿ ಅಮೆರಿಕದ ಹೂಸ್ಟನ್ನಲ್ಲಿ ಸಾವಿರಾರು ಭಾರತೀಯ-ಅಮೆರಿಕನ್ನರು ಭಾಗವಹಿಸಿದ್ದ ಹೌಡಿ ಮೋದಿ ಮೆಗಾ ಕಾರ್ಯಕ್ರಮವನ್ನು ನೆನಪಿಸಿಕೊಂಡ ಟ್ರಂಪ್, ಮೋದಿ ಅವರು ಟೆಕ್ಸಾಸ್ನ ಹೂಸ್ಟನ್ನಲ್ಲಿ ಹೌಡಿ ಮೋದಿ ಎಂಬ ಕಾರ್ಯಕ್ರಮವನ್ನು ಮಾಡಿದರು. ಅಂದು ನಾನು ಮತ್ತು ಅವರು ಇಬ್ಬರೂ ವೇದಿಕೆಯ ಮೇಲೆ ಹೋದೆವು. ಅದು ಬಹಳ ಸುಂದರವಾದ ಕಾರ್ಯಕ್ರಮವಾಗಿತ್ತು. ಅಲ್ಲಿ 80,000 ಭಾರತೀಯರು ಸೇರಿದ್ದರು. ಇಂದು ನಾನು ಅಧ್ಯಕ್ಷನಲ್ಲದೆ ಇರಬಹುದು, ನಾನು ಆಗಿನಂತೆ ಜನರ ನಡುವೆ ಹೋಗಿ ಕೈ ಬೀಸಲು ಸಾಧ್ಯವಾಗದಿರಬಹುದು. ಆದರೆ, ಇಂದಿಗೂ ನಾವಿಬ್ಬರೂ ಉತ್ತಮ ಸಂಬಂಧವನ್ನು ಹೊಂದಿದ್ದೇವೆ’ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ಕೂಡ ಭಾರತ-ಅಮೆರಿಕ ಸಂಬಂಧದ ಬಗ್ಗೆ ಮಾತನಾಡುವಾಗ, ಡೊನಾಲ್ಡ್ ಟ್ರಂಪ್ ಅವರು ಯುನೈಟೆಡ್ ಸ್ಟೇಟ್ಸ್ಗೆ ಮೋದಿ ಭೇಟಿ ನೀಡುವ ಸಂದರ್ಭದಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗುವುದಾಗಿ ಹೇಳಿದ್ದರು. ಆದರೆ, ಆ ಭೇಟಿ ಸಾಧ್ಯವಾಗಿರಲಿಲ್ಲ.