ಇಂದಿನ 2024ರ ಐಸಿಸಿ ಟಿ20 ವಿಶ್ವಕಪ್ನ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಪರಸ್ಪರ ಸೆಣಸಾಡುವುದರಿಂದ ಎಲ್ಲರ ಕಣ್ಣುಗಳು ಟಿವಿ ಮತ್ತು ಮೊಬೈಲ್ನತ್ತ ಅಂಟಿಕೊಂಡಿರುತ್ತವೆ.
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಟಿ20 ವಿಶ್ವಕಪ್ನ 19ನೇ ಪಂದ್ಯ ಇಂದು ನ್ಯೂಯಾರ್ಕ್ನ ನಸ್ಸೌ ಕೌಂಟಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ರೋಹಿತ್ ಶರ್ಮಾ ನೇತೃತ್ವದ ತಂಡವು ಐರ್ಲೆಂಡ್ ವಿರುದ್ಧ 8 ವಿಕೆಟ್ಗಳ ಗೆಲುವು ಸಾಧಿಸಿ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ. ಮತ್ತೊಂದೆಡೆ ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲೇ ಅಮೆರಿಕ ವಿರುದ್ಧ ಸೋಲು ಮುಖಭಂಗಕ್ಕೆ ಒಳಗಾಗಿದೆ.
ಎ ಗುಂಪಿನಲ್ಲಿ ಸೆಣಸಾಟ ನಡೆಸುವ ಉಭಯ ತಂಡಗಳು ಭರ್ಜರಿ ಗೆಲುವಿನ ಕನಸಿನಲ್ಲಿದೆ. ಆದರೆ, ಪಾಕಿಸ್ತಾನ ಈ ಪಂದ್ಯ ಸೋತರೆ, ಸೂಪರ್-8 ಪ್ರವೇಶಿಸುವ ಕನಸನ್ನು ಬಹುತೇಕ ಕಳೆದುಕೊಳ್ಳಲಿದೆ. ಹಾಗಾಗಿ ಎಚ್ಚರಿಕೆಯಿಂದ ಹೆಜ್ಜೆಯಿಡಲು ಪಾಕ್ ಸಿದ್ಧವಾಗುತ್ತಿದೆ. ಉಭಯ ತಂಡಗಳ ನಡುವಿನ ಕಾದಾಟಕ್ಕೆ ಇಡೀ ಪ್ರಪಂಚವೇ ಕಾತರದಿಂದ ಕಾಯುತ್ತಿದೆ.
ಕ್ರಿಕೆಟ್ ಲೋಕದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಕದನಕ್ಕೆ ವಿಶಿಷ್ಟ ಸ್ಥಾನಮಾನಗಳಿವೆ. ಅದರಲ್ಲೂ ಟಿ20 ವಿಶ್ವಕಪ್ನಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗಲ್ಲಂತೂ ಪಂದ್ಯದ ಬಿಸಿ ಉತ್ತುಂಗದಲ್ಲಿರುತ್ತದೆ. ಈ ಮಾದರಿಯಲ್ಲಿ 2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡು ಬಾರಿ ಮುಖಾಮುಖಿಯಾಗಿದ್ದವು. ಲೀಗ್ ಹಂತದಲ್ಲಿ ಮೊದಲ ಬಾರಿಗೆ ಮತ್ತು ಫೈನಲ್ನಲ್ಲಿ ಎರಡನೇ ಬಾರಿಗೆ ಪಂದ್ಯ ನಡೆದಿತ್ತು. ಆ ಆವೃತ್ತಿಯಲ್ಲಿ ಭಾರತ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತು. ಅಂದಿನಿಂದ ಇಲ್ಲಿಯವರೆಗೆ ಆಡಿದ ಏಳು ಆವೃತ್ತಿಗಳ ವಿಶ್ವಕಪ್ನಲ್ಲಿ ಎರಡೂ ತಂಡಗಳು ಐದು ಬಾರಿ ಮುಖಾಮುಖಿಯಾಗಿವೆ. ಈ ಐದು ಮುಖಾಮುಖಿಯಲ್ಲಿ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡಿದ ತಂಡವು ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಹೀಗಾಗಿಯೇ ಈ ಉಭಯರ ಮುಖಾಮುಖಿಯಲ್ಲಿ ಟಾಸ್ ಗೆದ್ದ ತಂಡಕ್ಕೆ ಹೆಚ್ಚು ಲಾಭವಾಗಲಿದೆ.
ಈ ಐದು ಮುಖಾಮುಖಿಯಲ್ಲಿ ಭಾರತ 4 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಒಂದು ಪಂದ್ಯವನ್ನು ಗೆದ್ದಿದೆ. 2021 ರಲ್ಲಿ ನಡೆದ ವಿಶ್ವಕಪ್ನಲ್ಲಿ ಮೊದಲು ಬೌಲಿಂಗ್ ಮಾಡಿದ್ದ ಪಾಕಿಸ್ತಾನ ಭಾರತವನ್ನು ಸೋಲಿಸಿತ್ತು. ಅಂದರೆ ಎರಡನೇ ಬ್ಯಾಟಿಂಗ್ ಮಾಡಿದ ತಂಡ ಶೇ.71ರಷ್ಟು ಪಂದ್ಯಗಳನ್ನು ಗೆದ್ದಿದೆ. ನಾವು ಒಟ್ಟಾರೆ ಟಿ20 ದಾಖಲೆಯ ಬಗ್ಗೆ ಮಾತನಾಡುವುದಾದರೆ, ಭಾರತ ಮತ್ತು ಪಾಕಿಸ್ತಾನ ನಡುವೆ ಒಟ್ಟು 12 ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಬೌಲಿಂಗ್ ಮಾಡಿದ ತಂಡ ಒಂಬತ್ತು ಪಂದ್ಯಗಳನ್ನು ಗೆದ್ದಿದೆ. ಹೀಗಿರುವಾಗ ಇಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ ವಿಶ್ವಕಪ್ 2024ರ ಹೈವೋಲ್ಟೇಜ್ ಪಂದ್ಯದಲ್ಲಿ ವಿಜೇತರನ್ನು ಟಾಸ್ ಸಂದರ್ಭದಲ್ಲಿ ನಿರ್ಧರಿಸಲಾಗುತ್ತದೆ ಎಂದರೆ ತಪ್ಪಾಗದು.