ಇಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ನ್ಯೂಜಿಲೆಂಡ್ ಮಣಿಸಿ 25 ವರ್ಷಗಳ ಲೆಕ್ಕಾ ಚುಪ್ತಾ ಮಾಡಲು ಟೀಮ್ ಇಂಡಿಯಾ ಸಿದ್ದವಾಗಿದೆ
Champions Trophy: ನಾಳೆ ಭಾರತ vs ನ್ಯೂಜಿಲೆಂಡ್ ಫೈನಲ್ ಪಂದ್ಯ: ಹೇಗಿದೆ ಪಿಚ್ ವರದಿ!
ಚಾಂಪಿಯನ್ಸ್ ಟ್ರೋಫಿಯ ಫೈನಲ್ಗೂ ಮುನ್ನ ಭಾರತ ತಂಡವು ಲೀಗ್ನಲ್ಲಿ ಅಜೇಯವಾಗಿತ್ತು. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಲೀಗ್ನಲ್ಲಿ ಗೆದ್ದಿದ್ದ ಭಾರತ ಸೆಮಿಫೈನಲ್ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಇದೀಗ ಫೈನಲ್ನಲ್ಲಿ ಕಿವೀಸ್ ಎದುರಿಸಲು ಸಜ್ಜಾಗಿದೆ. ಅತ್ತ ನ್ಯೂಜಿಲೆಂಡ್ ಲೀಗ್ನಲ್ಲಿ ಬಾಂಗ್ಲಾದೇಶ, ಪಾಕಿಸ್ತಾನವನ್ನು ಮಣಿಸಿತ್ತು. ಸೆಮೀಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಭಾರತವು ದುಬೈನ ಒಂದೇ ಪಿಚ್ನಲ್ಲಿ ಆಡುವ ಮೂಲಕ ಲಾಭ ಪಡೆಯುತ್ತಿದೆ ಎಂಬ ಆರೋಪಗಳನ್ನು ಎದುರಿಸುತ್ತಿದೆ.
ಭಾರತ ತಂಡವು ಅಜೇಯವಾಗಿ ಫೈನಲ್ ತಲುಪಿದ್ದು, ಫೈನಲ್ ಪಂದ್ಯವನ್ನೂ ಗೆಲ್ಲುವ ವಿಶ್ವಾಸದಲ್ಲಿದೆ. ಭಾರತ ತಂಡವು ಫೈನಲ್ಗೆ ತಲುಪುವ ಹಾದಿಯಲ್ಲಿ ಕಿವೀಸ್ ತಂಡವನ್ನು ಸೋಲಿಸಿದ್ದು, ಗೆಲುವಿನ ಭರವಸೆ ಮತ್ತಷ್ಟು ಹೆಚ್ಚಿಸಿದೆ.
ಐಸಿಸಿ ಟೂರ್ನಿಗಳ ಎರಡು ಫೈನಲ್ಗಳಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಸೋತಿದೆ. ನ್ಯೂಜಿಲೆಂಡ್ ತಂಡವು ಚಾಂಪಿಯನ್ಸ್ ಟ್ರೋಫಿ-2000 ಮತ್ತು ವಿಶ್ವ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್-2021ರ ಫೈನಲ್ಗಳಲ್ಲಿ ಭಾರತವನ್ನು ಸೋಲಿಸಿದೆ. ಇನ್ನೂ ಇಲ್ಲಿಯವರೆಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವೆ 119 ಏಕದಿನ ಪಂದ್ಯಗಳು ನಡೆದಿದ್ದು, ಇದರಲ್ಲಿ ನ್ಯೂಜಿಲೆಂಡ್ 61 ಪಂದ್ಯಗಳನ್ನು ಗೆದ್ದಿದೆ. ಇತ್ತ ಭಾರತ 50 ಪಂದ್ಯಗಳನ್ನು ಗೆದ್ದಿದೆ. ಇದೀಗ ಭಾರತಕ್ಕೆ ಈ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶವಿದೆ.
ಇನ್ನೂ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಜಿದ್ದಾಜಿದ್ದಿನ ಪಂದ್ಯ ನಡೆಯಲಿದ್ದು, ಈ ಪಂದ್ಯ ವೀಕ್ಷಿಸಲು ಬರೀ ಭಾರತ, ನ್ಯೂಜಿಲೆಂಡ್ ಅಷ್ಟೇ ಅಲ್ಲದೆ ಇಡೀ ವಿಶ್ವವೇ ಕಾಯುತ್ತಿದೆ.
ಹವಾಮಾನ ವರದಿ ಹೇಗಿದೆ!?
ದುಬೈನಲ್ಲಿ ಸದ್ಯ ಮಳೆ ಮುನ್ಸೂಚನೆ ಇಲ್ಲ. ಭಾನುವಾರದ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಕಡಿಮೆ. ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಮೀಸಲು ದಿನವಾದ ಸೋಮವಾರ ಪಂದ್ಯ ನಡೆಸಲಾಗುತ್ತದೆ. ಈ ಎರಡೂ ದಿನಗಳಲ್ಲಿ ಪಂದ್ಯ ನಡೆಯದಿದ್ದರೆ ಭಾರತ-ನ್ಯೂಜಿಲೆಂಡ್ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. 2002ರಲ್ಲಿ ಭಾರತ-ಶ್ರೀಲಂಕಾ ಜಂಟಿ ಚಾಂಪಿಯನ್ ಆಗಿದ್ದವು.