ಟೀಂ ಇಂಡಿಯಾ ಆಟಗಾರರು ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಈ ಮೂಲಕ 175 ರನ್ಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಲ್ಲದೇ ಮೂರನೇ ದಿನವೂ ಟೀಂ ಇಂಡಿಯಾ ಬ್ಯಾಟಿಂಗ್ ಮುಂದುವರಿಸಲಿದೆ.
ಪಂದ್ಯದ ಮೊದಲ ದಿನ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, 64.3 ಓವರ್ಗಳಲ್ಲಿ 246 ರನ್ಗಳಿಗೆ ಆಲೌಟ್ ಆಗಿತ್ತು. ಬಳಿಕ ಬ್ಯಾಟ್ ಮಾಡಿದ ಭಾರತ, 1 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿತ್ತು. ಆ ಮೂಲಕ ಕೇವಲ 127 ರನ್ಗಳ ಅಲ್ಪ ಹಿನ್ನಡೆಯೊಂದಿಗೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿತ್ತು. ಇಂದು ಮತ್ತೆ ಬ್ಯಾಟಿಂಗ್ ಮುಂದುವರೆಸಿದ ಭಾರತ, ದಿನದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 421 ರನ್ ಗಳಿಸಿದೆ.
ಇಂದಿನ ಆಟದ ಆರಂಭದಲ್ಲೇ ಜೈಸ್ವಾಲ್ ಔಟಾದರು. 74 ಎಸೆತಗಳಲ್ಲಿ 80 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್, ರೂಟ್ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ಅದಾದ ಕೆಲವೇ ಹೊತ್ತಿನಲ್ಲಿ ಶುಭಮನ್ ಗಿಲ್ ಕೂಡಾ 23 ರನ್ ಗಳಿಸಿ ವಿಕೆಟ್ ಒಪ್ಪಿಸಿ, ಪೆವಿಲಿಯನ್ಗೆ ಮರಳಿದರು. ಬಳಿಕ ಒಂದಾದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇಬ್ಬರೂ ಅರ್ಧಶತಕದ ಜೊತೆಯಾಟವಾಡಿದರು. ಒಂದು ಸಿಕ್ಸರ್ ಸಹಿತ 35 ರನ್ ಗಳಿಸಿದ್ದ ಅಯ್ಯರ್, ದೊಡ್ಡ ಹೊಡೆತಕ್ಕೆ ಕೈ ಹಾಕಿ ರೆಹಾನ್ ಅಹ್ಮದ್ ಎಸೆತದಲ್ಲಿ ಔಟಾದರು. ಈ ವೇಳೆ ಕೆಎಸ್ ಭರತ್ ಜೊತೆಗೂಡಿದ ರಾಹುಲ್, ಅರ್ಧಶತಕದ ಜೊತೆಯಾಟ ಪೂರ್ಣಗೊಂಡ ಬಳಿಕ, 86 ರನ್ ಗಳಿಸಿದ್ದ ರಾಹುಲ್ ಸಿಕ್ಸರ್ ಸಿಡಿಸಲು ಮುಂದಾಗಿ ಕ್ಯಾಚ್ ನೀಡಿ ಔಟಾದರು.
ಬಳಿಕ ರವೀಂದ್ರ ಜಡೇಜಾ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಆಡಿದ ಭರತ್, 41 ರನ್ ಗಳಿಸಿದ್ದಾಗ ರೂಟ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆದರೂ. ಅವರ ಬೆನ್ನಲ್ಲೇ ಆರ್.ಅಶ್ವಿನ್ ರನೌಟ್ ಆದರು. ಈ ವೇಳೆ ಒಂದಾದ ಜಡೇಜಾ ಮತ್ತು ಅಕ್ಷರ್ ಪಟೇಲ್ ಮತ್ತೆ ಜೊತೆಯಾಟ ಮುಂದುವರೆಸಿದರು. ಉತ್ತಮ ಇನ್ನಿಂಗ್ಸ್ ಆಡಿದ ಜಡೇಜಾ ಅರ್ಧಶತಕ ಸಿಡಿಸಿದರು.
ದಿನದಾಟದ ಅಂತ್ಯದ ವೇಳೆಗೆ ಜಡೇಜಾ 155 ಎಸೆತಗಳಲ್ಲಿ ಅಜೇಯ 81 ರನ್ ಗಳಿಸಿದ್ದಾರೆ. ಅತ್ತ ಅಕ್ಷರ್ ಪಟೇಲ್ ಅಜೇಯ 35 ರನ್ ಗಳಿಸಿದ್ದಾರೆ. ಇಬ್ಬರೂ ಎಂಟನೇ ವಿಕೆಟ್ಗೆ ಅಜೇಯ 63 ರನ್ ಒಟ್ಟುಗೂಡಿಸಿದ್ದಾರೆ.
ಮೊದಲ ದಿನದಾಟದ ಕೊನೆಯ ಸೆಷನ್ನಲ್ಲಿ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್, ಮೊದಲ ವಿಕೆಟ್ಗೆ 80 ರನ್ಗಳ ಜೊತೆಯಾಟವಾಡಿದರು. 27 ಎಸೆತಗಳಲ್ಲಿ 24 ರನ್ ಗಳಿಸಿದ ರೋಹಿತ್ ಶರ್ಮಾ, ಲೀಚ್ ಎಸೆತದಲ್ಲಿ ಸ್ಟೋಕ್ಸ್ಗೆ ಕ್ಯಾಚ್ ನೀಡಿ ಔಟಾದರು. ಇನ್ನೂ ಆಕ್ರಮಣಕಾರಿ ಆಟವಾಡಿದ ಜೈಸ್ವಾಲ್, ಕೇವಲ 70 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸ್ಫೋಟಕ ಸಿಕ್ಸರ್ ಸಹಿತ 76 ರನ್ ಸಿಡಿಸಿದ್ದರು. ಎರಡನೇ ದಿನ ಆಟ ಮುಂದುವರೆಸಿ 80 ರನ್ಗೆ ಔಟಾಗಿದ್ದಾರೆ.