ಮುಂಬೈ: ಅಫ್ಘಾನಿಸ್ತಾನ (Afghanistan) ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ (T20 Series) ಭಾರತ ತಂಡವನ್ನು ಬಿಸಿಸಿಐ ಭಾನುವಾರ (ಜ.7) ಪ್ರಕಟಿಸಿದೆ. ವಿಶೇಷವೆಂದರೆ 2023ರ ಏಕದಿನ ವಿಶ್ವಕಪ್ ಬಳಿಕ ಟಿ20 ಪಂದ್ಯಗಳಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದ ನಾಯಕ ರೋಹಿತ್ ಶರ್ಮಾ ಅವರಿಗೆ ಮತ್ತೆ ಟಿ20 ಪಂದ್ಯಗಳಿಗೆ ನಾಯಕತ್ವದ ಹೊಣೆ ನೀಡಲಾಗಿದೆ.
ರೋಹಿತ್ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ನಿರಂತರವಾಗಿ ಆಡುತ್ತಿದ್ದರು. ಹಲವು ತಿಂಗಳಿನಿಂದ ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ವರ್ಷದ ಜೂನ್ನಲ್ಲಿ ಟಿ20 ವಿಶ್ವಕಪ್ (T20 WorldCup) ಟೂರ್ನಿ ಆಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಚುಟುಕು ಸ್ವರೂಪದ ಟೂರ್ನಿಗೆ ಇಬ್ಬರು ಎಂಟ್ರಿಕೊಟ್ಟಿದ್ದಾರೆ
ಚುಟುಕು ಸ್ವರೂಪಕ್ಕೆ ಇವರಿಬ್ಬರನ್ನು ಆಯ್ಕೆ ಮಾಡುವ ಕುರಿತು ಸಾಕಷ್ಟು ಊಹಾಪೋಹಗಳು ಇದ್ದವು. ಈ ನಡುವೆ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರೂ ಗಾಯದಿಂದಾಗಿ ಆಯ್ಕೆಗೆ ಲಭ್ಯರಿಲ್ಲ. ಹೀಗಾಗಿ ರೋಹಿತ್ ಮತ್ತು ಕೊಹ್ಲಿಯನ್ನು ತಂಡದಲ್ಲಿ ಹಿರಿಯ ಬ್ಯಾಟರ್ಗಳಾಗಿ ಬಿಸಿಸಿಐ (BCCI) ತಂಡಕ್ಕೆ ವಾಪಸ್ ಕರೆಸಿಕೊಂಡಿದೆ.
ಅಫ್ಘಾನ್ ವಿರುದ್ಧ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಕುಲ್ದೀಪ್ ಯಾದವ್, ಅರ್ಷ್ದೀಪ್ ಸಿಂಗ್, ಅವೇಶ್ ಖಾನ್, ಮುಕೇಶ್ ಕುಮಾರ್.
ಜನವರಿ 11 ರಿಂದ ಸರಣಿ ಪ್ರಾರಂಭವಾಗಲಿದ್ದು, ಮೊದಲ ಟಿ20 ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಜ.14 ರಂದು ಇಂದೋರ್ನ ಹೋಳ್ಕರ್ ಮೈದಾನದಲ್ಲಿ 2ನೇ ಪಂದ್ಯ ನಡೆಯಲಿದೆ. ಜನವರಿ 17 ರಂದು ಅಂತಿಮ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಇದು ಭಾರತ ತಂಡಕ್ಕೆ ಕೊನೆಯ ಚುಟುಕು ಅಂತಾರಾಷ್ಟ್ರೀಯ ಸರಣಿಯಾಗಿರಲಿದೆ. ಹಾಗಾಗಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.