ನ್ಯೂಯಾರ್ಕ್: ಇಡೀ ಕ್ರಿಕೆಟ್ ಜಗತ್ತೇ ಕಾದು ಕುಳಿತಿರುವ ಭಾರತ ಮತ್ತು ಪಾಕಿಸ್ತಾನ ನಡುವಣ ರೋಚಕ ಟಿ20 ವಿಶ್ವಕಪ್ ಪಂದ್ಯಕ್ಕೆ ಕ್ಷಣಗಣನೆ ಬಾಕಿಯಿದೆ. ಹೀಗಿರುವಾಗಲೇ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯೊಂದು ಎದುರಾಗಿದ್ದು, ಈ ಪಂದ್ಯ ನಡೆಯೋದೇ ಡೌಟ್ ಎನ್ನಲಾಗುತ್ತಿದೆ. ಹೌದು, ಭಾನುವಾರ ನ್ಯೂಯಾರ್ಕ್ನಲ್ಲಿ ನಿಗದಿಯಾಗಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
Muskmelon Seeds: ಕರ್ಬೂಜ ಹಣ್ಣಿನ ಬೀಜಗಳಿಂದ ಎಷ್ಟೆಲ್ಲಾ ಅದ್ಭುತ ಪ್ರಯೋಜನಗಳಿವೆ ಗೊತ್ತಾ..?
ಹವಾಮಾನ ಮುನ್ಸೂಚನೆ ಪ್ರಕಾರ, ಭಾನುವಾರ ನ್ಯೂಯಾರ್ಕ್ನಲ್ಲಿ ಮಳೆಯಾಗುವ ಸಾಧ್ಯತೆ ಶೇ.51ರಷ್ಟು ಇದೆ. ಕ್ರೀಡಾಂಗಣದ ಔಟ್ಫೀಲ್ಡ್ ಮೊದಲೇ ನಿಧಾನಗತಿಯಲ್ಲಿದ್ದು, ಮಳೆ ಬಿದ್ದರೆ ಮತ್ತಷ್ಟು ನಿಧಾನಗೊಳ್ಳಲಿದೆ. ಜೊತೆಗೆ ಇದೊಂದು ತಾತ್ಕಾಲಿಕ ಕ್ರೀಡಾಂಗಣವಾಗಿರುವ ಕಾರಣ, ಇಲ್ಲಿ ಒಳಚರಂಡಿ ವ್ಯವಸ್ಥೆಯೂ ಸೂಕ್ತ ರೀತಿಯಲ್ಲಿ ಇದ್ದಂತಿಲ್ಲ. ಹೀಗಾಗಿ ಕೆಲ ಕಾಲ ಮಳೆ ಸುರಿದರೂ ಪಂದ್ಯ ರದ್ದಾಗುವ ಸಾಧ್ಯತೆಯೇ ಹೆಚ್ಚು.
ಮಳೆಯಿಂದ ಭಾರತ-ಪಾಕಿಸ್ತಾನ ಪಂದ್ಯ ರದ್ದಾದರೆ ಕಥೆ ಏನು?
ಟಿ20 ವಿಶ್ವಕಪ್ ಟೂರ್ನಿಯ ಗುಂಪು ಹಂತದ ಪಂದ್ಯಗಳಿಗೆ ಯಾವುದೇ ರೀತಿಯ ಮೀಸಲು ದಿನವನ್ನು ನೀಡಲಾಗಿಲ್ಲ. ಒಂದು ವೇಳೆ ಭಾನುವಾರ ನಡೆಯಲಿರುವ ಭಾರತ ಹಾಗೂ ಯುಎಸ್ಎ ಪಂದ್ಯ ಮಳೆಯಿಂದ ಸಂಪೂರ್ಣ ರದ್ದಾದರೆ, ಎರಡೂ ತಂಡಗಳಿಗೂ ಒಂದೊಂದು ಅಂಕವನ್ನು ಹಂಚಲಾಗುತ್ತದೆ. ಮಳೆ ಬಂದರೆ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡ ಭಾರತಕ್ಕೆ ಹಿನ್ನಡೆಯಾದರೆ, ಈಗಾಗಲೇ ಒಂದು ಪಂದ್ಯವನ್ನು ಸೋತಿರುವ ಪಾಕಿಸ್ತಾನಕ್ಕೆ ಲಾಭದಾಯಕವಾಗಲಿದೆ.
ಪಂದ್ಯಕ್ಕೆ ಭಾರಿ ಭದ್ರತೆ!
ಐಸಿಸ್ ಉಗ್ರರಿಂದ ಪಂದ್ಯದ ಮೇಲೆ ದಾಳಿ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ನ್ಯೂಯಾರ್ಕ್ ಪೊಲೀಸರು ಬಿಗಿ ಭದ್ರತೆ ಒದಗಿಸಲಿದ್ದಾರೆ. ಅಲ್ಲದೇ ಕ್ರೀಡಾಂಗಣದ ಸುತ್ತ ಮುತ್ತ ದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಮೆರಿಕ ಅಧ್ಯಕ್ಷರ ಕಾರ್ಯಕ್ರಮಗಳಿಗೆ ನೀಡುವ ಭದ್ರತೆ ರೀತಿಯಲ್ಲಿ ಈ ಪಂದ್ಯಕ್ಕೂ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ನ್ಯೂಯಾರ್ಕ್ ಪೊಲೀಸ್ ಆಯುಕ್ತ ತಿಳಿಸಿದ್ದಾರೆ. ಎಫ್ಬಿಐ ಸೇರಿ ಅಮೆರಿಕದ ವಿವಿಧ ಭದ್ರತಾ ಏಜೆನ್ಸಿಗಳು ಸಹ ತನ್ನ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಿವೆ ಎಂದು ತಿಳಿದುಬಂದಿದೆ.