ಜಿಂಬಾಬ್ವೆಯನ್ನು 4-1 ಅಂತರದಿಂದ ಸೋಲಿಸಿ ಶುಭ್ಮನ್ ಗಿಲ್ ಸಾರಥ್ಯದ ಯುವ ಭಾರತ ತಂಡ ಸರಣಿ ಕೈವಶ ಮಾಡಿಕೊಂಡಿದೆ.
Kolara: ಸಂವಿಧಾನ ಬದಲಾಯಿಸಲು ಬಂದಿಲ್ಲ ಬದಲಿಗೆ ಬಲಪಡಿಸಲು ಬಂದಿದ್ದೇವೆ – ರಾಮದಾಸ್ ಅಥವಲೇ
ತಂಡದ ಈ ಗೆಲುವಿನಲ್ಲಿ ಸಂಜು ಸ್ಯಾಮ್ಸನ್ ಮತ್ತು ಮುಖೇಶ್ ಕುಮಾರ್ ಪ್ರಮುಖ ಪಾತ್ರವಹಿಸಿದರು. ತಂಡದ ಪರ ಮುಖೇಶ್ ಕೇವಲ 22 ರನ್ ನೀಡಿ 4 ವಿಕೆಟ್ ಪಡೆದರೆ, ದುಬೆ 2 ವಿಕೆಟ್ ಪಡೆದರು. ಉಳಿದ ಬೌಲರ್ಗಳು ತಲಾ 1 ವಿಕೆಟ್ ಪಡೆದರು. ಯುವ ಆಟಗಾರರಿಂದ ತುಂಬಿರುವ ತಂಡ ಪ್ರದರ್ಶನ ನೀಡಿದ ರೀತಿಯನ್ನು ನೋಡಿದರೆ ಜುಲೈ 6 ರಂದು ಹರಾರೆಯಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಆಘಾತಕಾರಿ ಸೋಲಿನ ನೋವು ಸಂಪೂರ್ಣವಾಗಿ ಮಾಯವಾಗಿದೆ. ಆದಾಗ್ಯೂ, ಆ ಸೋಲು ಖಂಡಿತವಾಗಿಯೂ ತಂಡಕ್ಕೆ ಎಚ್ಚರಿಕೆಯ ಗಂಟೆಯಾಗಿ ಕಾರ್ಯನಿರ್ವಹಿಸಿತು. ಅದರ ಪರಿಣಾಮ ಮುಂದಿನ 4 ಪಂದ್ಯಗಳಲ್ಲಿ ಗೋಚರಿಸಿತು. ಪ್ರತಿಯೊಂದು ಪಂದ್ಯದಲ್ಲೂ ವಿಭಿನ್ನ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ 4-1 ಅಂತರದಲ್ಲಿ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸರಣಿಯ ಕಳೆದ 4 ಪಂದ್ಯಗಳಲ್ಲಿ ನಿರಂತರವಾಗಿ ಟಾಸ್ ಸೋತಿದ್ದ ಜಿಂಬಾಬ್ವೆ ನಾಯಕ ಸಿಕಂದರ್ ರಜಾ ಈ ಬಾರಿ ಟಾಸ್ ಗೆದ್ದು, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಉತ್ತಮ ಆರಂಭ ಪಡೆದಿತ್ತು. ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ನ ಮೊದಲ ಎಸೆತದಲ್ಲಿ 13 ರನ್ ಬಾರಿಸಿದರು. ವಾಸ್ತವವಾಗಿ, ಸಿಕಂದರ್ ರಜಾ ಬೌಲಿಂಗ್ ಮಾಡಿದ ಮೊದಲ ಎಸೆತದಲ್ಲಿ ಜೈಸ್ವಾಲ್ ಸಿಕ್ಸರ್ ಬಾರಿಸಿದರು. ಇದಾದ ಬಳಿಕ ಫ್ರೀ ಹಿಟ್ನ ಲಾಭ ಪಡೆದು ಮತ್ತೊಂದು ಸಿಕ್ಸರ್ ಬಾರಿಸಿದರು. ಆದರೆ, ಈ ಓವರ್ನ ನಾಲ್ಕನೇ ಎಸೆತದಲ್ಲಿ ರಾಝಾ, ಜೈಸ್ವಾಲ್ರನ್ನು ಔಟ್ ಮಾಡಿದರು. ಇದಾದ ಬಳಿಕ ಕೇವಲ 14 ರನ್ ಗಳಿಸಲಷ್ಟೇ ಶಕ್ತರಾದ ಅಭಿಷೇಕ್ ಶರ್ಮಾ 2ನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡರು. ಕ್ಯಾಪ್ಟನ್ ಗಿಲ್ ಕೂಡ 13 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಪವರ್ಪ್ಲೇಯಲ್ಲಿ ಭಾರತ ಮೂರು ವಿಕೆಟ್ ಕಳೆದುಕೊಂಡಿತು.
ಇದಾದ ನಂತರ ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇವರಿಬ್ಬರ ನಡುವೆ ನಾಲ್ಕನೇ ವಿಕೆಟ್ಗೆ 65 ರನ್ಗಳ ಜೊತೆಯಾಟವಿತ್ತು. 15ನೇ ಓವರ್ನಲ್ಲಿ ಪರಾಗ್ 22 ರನ್ ಗಳಿಸಿ ಔಟಾದರು. ಆದರೆ, ಸಂಜು ಸ್ಯಾಮ್ಸನ್ 58 ರನ್ಗಳ ಬಿರುಸಿನ ಇನ್ನಿಂಗ್ಸ್ನ ನಂತರ ಪೆವಿಲಿಯನ್ಗೆ ಮರಳಿದರು. ಈ ಪಂದ್ಯದಲ್ಲಿ ಶಿವಂ ದುಬೆ 26 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ರಿಂಕು 11 ರನ್ ಗಳಿಸಿ ಅಜೇಯರಾಗಿ ಉಳಿದರು. ಜಿಂಬಾಬ್ವೆ ಪರ ಮುಜರಬಾನಿ ಎರಡು ವಿಕೆಟ್ ಪಡೆದರೆ, ರಾಝಾ ರಿಚರ್ಡ್ ಮತ್ತು ಮಾವುಟಾ ತಲಾ ಒಂದು ವಿಕೆಟ್ ಪಡೆದರು.