ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಜಿದ್ದಾಜಿದ್ದಿ ಕಣದಲ್ಲಿ ಭಾರತ ಮಹಿಳಾ ತಂಡವು ಪಾಕಿಸ್ತಾನ (Ind vs Pak) ಮಹಿಳಾ ತಂಡದ ವಿರುದ್ಧ 6 ವಿಕೆಟ್ಗಳ ಅಮೋ ಗೆಲುವು ಸಾಧಿಸಿದೆ. ಇದರೊಂದಿಗೆ ಟಿ20 ವಿಶ್ವಕಪ್ (Women’s T20 World Cup) ಪ್ರಸಕ್ತ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆದು ಸೆಮಿಸ್ ಕನಸು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಪಾಕಿಸ್ತಾನ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 105 ರನ್ ಗಳಿಸಿತ್ತು. ಅಲ್ಪಮೊತ್ತದ ಗುರಿ ಬೆನ್ನಟ್ಟಿದ್ದ ಭಾರತ 18.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಒಂದೆಡೆ ರನ್ ಕಲೆಹಾಕುತ್ತಾ ಸಾಗಿದ ಭಾರತ ಮಹಿಳಾ ತಂಡಕ್ಕೆ ಪಾಕ್ ಕಠಿಣ ಪೈಪೋಟಿ ನೀಡಿತ್ತು. 16ನೇ ಓವರ್ನಲ್ಲಿ ನಾಯಕಿ ಫಾತಿಮಾ ಸನಾ ಅವರು ರೊಡ್ರಿಗ್ಸ್ ಹಾಗೂ ರಿಚಾಘೋಷ್ ಅವರ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದರು. ಇದರಿಂದ ಪಾಕ್ ಗೆಲುವಿನ ಕನಸು ಕಂಡಿತ್ತು. ಬಳಿಕ ಕಣಕ್ಕಿಳಿದ ಹರ್ಮನ್ಪ್ರೀತ್ ಪಂದ್ಯದ ದಿಕ್ಕನ್ನೇ ಬದಲಿಸಿ, ತಂಡವನ್ನು ಗೆಲುವಿನ ದಡ ಸೇರಿಸಿದರು.
ಟೀಂ ಇಂಡಿಯಾ ಪರ ಶಫಾಲಿ ವರ್ಮಾ 32 ರನ್, ಜೆಮಿಮಾ ರೊಡ್ರಿಗ್ಸ್ 23 ರನ್, ಹರ್ಮನ್ ಪ್ರೀತ್ ಕೌರ್ 29 ರನ್ ಗಳಿಸಿದ್ರೆ, ದೀಪ್ತಿ ಶರ್ಮಾ 7 ರನ್, ಸಜೀವನ್ ಸಜನಾ 4 ರನ್ ಗಳಿಸಿ ಕ್ರೀಸ್ನಲ್ಲಿ ಉಳಿದರು.
ಪಾಕ್ ಪರ ಫಾತಿಮಾ ಸನಾ 2 ವಿಕೆಟ್ ಕಿತ್ತರೆ, ಒಮೈಮಾ ಸೋಹಾಲ್, ಸೈದಾ ಇಕ್ಬಾಲ್ ತಲಾ ಒಂದೊಂದು ವಿಕೆಟ್ ಕಿತ್ತರು.
ಪಾಕ್ ತಂಡದ ಆಟಗಾರ್ತಿಯರನ್ನು ಭಾರತದ ಬೌಲರ್ಗಳು ಇನ್ನಿಲ್ಲದಂತೆ ಕಾಡಿದರು. ಆರಂಭಿಕ ಬ್ಯಾಟರ್ ಗುಲ್ ಫಿರೋಜಾ ಅವರು ಖಾತೆ ತೆರೆಯುವ ಮುನ್ನವೇ, ವೇಗಿ ರೇಣುಕಾ ಠಾಕೂರ್ ಸಿಂಗ್ ಮೊದಲ ಓವರ್ನಲ್ಲೇ ಪೆವಿಲಿಯನ್ಗೆ ಅಟ್ಟಿದರು. ನಂತರ ಕಣಕ್ಕಿಳಿದ ಸಿದ್ರಾ ಅಮಿನ್ (8) ಅವರನ್ನು ದೀಪ್ತಿ ಶರ್ಮಾ ಹೆಚ್ಚು ಹೊತ್ತು ಉಳಿಯದಂತೆ ನೋಡಿಕೊಂಡರು. ನಿದಾ ದರ್ (28 ರನ್) ಹೊರತುಪಡಿಸಿ ಉಳಿದವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಪಾಕಿಸ್ತಾನ ಪರ ಬ್ಯಾಟಿಂಗ್ ನಲ್ಲಿ ಮುನೀಬಾ ಅಲಿ 17, ನಿದಾ ದಾರ್ 28 ಮತ್ತು ಸೈದಾ ಶಾ ಅಜೇಯ 14 ರನ್ ಪೇರಿಸಿದರು. ಭಾರತ ಪರ ಬೌಲಿಂಗ್ ನಲ್ಲಿ ಅರುಂಧತಿ ರೆಡ್ಡಿ 3, ಶ್ರೇಯಾಂಕಾ ಪಟೇಲ್ 2, ರೇಣುಕಾ ಸಿಂಗ್, ದೀಪ್ತಿ ಶರ್ಮಾ, ಆಶಾ ಶೋಭನ ತಲಾ 1 ವಿಕೆಟ್ ಪಡೆದರು.
ಭಾರತದ ಪರ ಅರುಂಧತಿ ರೆಡ್ಡಿ 3 ವಿಕೆಟ್ ಪಡೆದರೆ, ಕರ್ನಾಟಕದ ಶ್ರೇಯಂಕಾ ಪಾಟೀಲ್ 2 ವಿಕೆಟ್ ಉರುಳಿಸಿದರು. ರೇಣುಕಾ, ದೀಪ್ತಿ ಹಾಗೂ ಆಶಾ ಶೋಬನಾ ತಲಾ ಒಂದೊಂದು ವಿಕೆಟ್ ಉರುಳಿಸಿದರು.