ಬೆಳಗಾವಿ : ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಆರಕ್ಷಕರೇ ಭಕ್ಷಕರಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.
ಮಹಿಳೆಯೋರ್ವಳಿಗೆ ಕಿರುಕುಳ ಆರೋಪದಡಿ ಮಹಿಳೆಯ ದೂರಿನ ಮೆರೆಗೆ ಸಂಕೇಶ್ವರ ಪೊಲೀಸ್ ಠಾಣೆಯ ಪಿಎಸ್ಐ ನರಸಿಂಹರಾಜು ಜೆ.ಡಿ. ಅವರನ್ನು ಅಮಾನತು ಮಾಡಿ ಬೆಳಗಾವಿ ಜಿಲ್ಲಾ ಎಸ್ಪಿ ಭೀಮಾಶಂಕರ ಗುಳೇದ್ ಆದೇಶ ಹೊರಡಿಸಿದ್ದಾರೆ.
ಘಟನೆಯಲ್ಲಿ ಕರ್ತವ್ಯ ಲೋಪ, ಅಶಿಸ್ತು ಹಾಗೂ ದುರ್ನಡೆತೆ ಕಂಡು ಬಂದ ಹಿನ್ನಲೆ ಈ ಭಕ್ಷಕ ಪಿಎಸ್ಐ ಅವರನ್ನು ಅಮಾನತು ಮಾಡಿ ಬೆಳಗಾವಿ ಜಿಲ್ಲಾ ಪಲೀಸ್ ವರಿಷ್ಠಾಧಿಕಾರಿ ಆದೇಶ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಸಂಕೇಶ್ವರ ಪೊಲೀಸ ಠಾಣೆಗೆ ತಮ್ಮ ಕೌಟುಂಬಿಕ ಸಮಸ್ಯೆ ಕುರಿತು ತಮ್ಮ ಪತಿಯ ವಿರುದ್ಧ ದೂರು ನೀಡಿದ್ದ ಮಹಿಳೆಯೊಬ್ಬಳು ಸಂಕೇಶ್ವರ ಠಾಣೆಗೆ ಧಾವಿಸಿ ದೂರು ನೀಡಿದ್ದರು. ಆದರೆ, ಪಿಎಸ್ ಐ ನರಸಿಂಹರಾಜು ಜೆ.ಡಿ ಈ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಮಹಿಳೆಯ ಮೊಬೈಲ್ ಸಂಖ್ಯೆ ಪಡೆದು ಅವಳ ಸಂಪರ್ಕ ಬೆಳೆಸಿ ಅವಳನ್ನ ಕರೆದುಕೊಂಡು ತಿರುಗಾಡಿದ್ದಾರೆ ಎನ್ನುವ ಮಾಹಿತಿ ಇದೆ.
ಪಿಎಸ್ ಐ ಅವರ ವರ್ತನೆಗೆ ಬೆಸತ್ತ ಮಹಿಳೆ ನ್ಯಾಯ ಕೊಡಿಸುವಂತೆ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಳು. ಮಹಿಳೆಯ ದೂರಿನನ್ವಯ ವಿಚಾರಣೆ ನಡೆಸಿದ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳು ಪಿಎಸ್ಐ ನರಸಿಂಹರಾಜು ಅವರನ್ನ ಕರ್ತವ್ಯ ಲೋಪ, ಮಹಿಳೆಯೊಂದಿಗೆ ದುರ್ನಡತೆ ಹಾಗೂ ಅಶಿಸ್ತು ತೋರಿದ್ದಾರೆ ಎಂದು ನರಸಿಂಹರಾಜು ಅವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.