ಕೇಪ್ಟೌನ್: ಜಸ್ಪ್ರೀತ್ ಬುಮ್ರಾ (Jasprit Bumrah), ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ದಾಳಿ ನೆರವಿನಿಂದ ಭಾರತ (Team India), ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ಗಳ ಐತಿಹಾಸಿಕ ಜಯ ಸಾಧಿಸಿತು. ಈ ಮೂಲಕ ತವರಿನಲ್ಲೇ ಹರಿಣರನ್ನು ಬಗ್ಗುಬಡಿದು 1-1ರಲ್ಲಿ ಸರಣಿ ಸಮಬಲಗೊಳಿಸಿತು.
ಈ ಗೆಲುವಿನ ಮೂಲಕ ರೋಹಿತ್ ಶರ್ಮಾ (Rohit Sharma) ಕೇಪ್ಟೌನ್ನಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಏಷ್ಯಾದ ಮೊದಲ ನಾಯಕ ಎಂಬ ಕೀರ್ತಿಗೆ ಪಾತ್ರರಾದರು. ಅಲ್ಲದೇ ಎಂ.ಎಸ್ ಧೋನಿ ನಂತರ ದಕ್ಷಿಣ ಆಫ್ರಿಕಾದಲ್ಲಿ (South Africa) ಟೆಸ್ಟ್ ಸರಣಿಯನ್ನು ಸಮಬಲಗೊಳಿಸಿದ 2ನೇ ಭಾರತೀಯ ನಾಯಕ ಎಂಬ ಹಿರಿಮೆಗೂ ರೋಹಿತ್ ಪಾತ್ರರಾದರು.
ಕೇವಲ ಎರಡೇ ದಿನಗಳಲ್ಲಿ ಮುಕ್ತಾಯಗೊಂಡ ಈ ಪಂದ್ಯವು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಚುಟುಕು ಪಂದ್ಯ ಎನಿಸಿಕೊಂಡಿತು. ಇತ್ತಂಡಗಳ ಇನ್ನಿಂಗ್ಸ್ಗಳಿಂದ ಒಟ್ಟು 642 ಎಸೆತಗಳು ದಾಖಲಾದವು. 1932ರಂದು ಮೆಲ್ಬರ್ನ್ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ 656 ಎಸೆತಗಳು ಹಾಗೂ 1935ರಲ್ಲಿ ಬ್ರಿಡ್ಜ್ಟೌನ್ನಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ 672 ಎಸೆತಗಳು ದಾಖಲಾಗಿದ್ದು, ಈವರೆಗಿನ ಸಾಧನೆಯಾಗಿತ್ತು.