ಕಿವೀಸ್ ಬ್ಯಾಟಿಂಗ್ ಆರಂಭಿಸುತ್ತಿದ್ದಂತೆ ಮ್ಯಾಚ್ ನಿಲ್ಲಿಸಿದ ಅಂಪೈರ್ಸ್ ವಿರುದ್ಧ ಟೀಂ ಇಂಡಿಯಾ ಆಟಗಾರರು ರೊಚ್ಚಿಗೆದ್ದಿದ್ದಾರೆ.
2028 ರವರೆಗೆ ಕಾಂಗ್ರೆಸ್ ಸರ್ಕಾರ ಇರಲು ಸಾಧ್ಯವೇ ಇಲ್ಲ: HD ಕುಮಾರಸ್ವಾಮಿ ಭವಿಷ್ಯ!
ನ್ಯೂಜಿಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 46 ರನ್ಗಳಿಗೆ ಆಲೌಟ್ ಆಗಿದ್ದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲಿ ಪ್ರಬಲ ಪುನರಾಗಮನ ಮಾಡಿತ್ತಾದರೂ ನ್ಯೂಜಿಲೆಂಡ್ಗೆ ದೊಡ್ಡ ಗುರಿ ನೀಡಲು ವಿಫಲವಾಗಿದೆ. ಇದೆಲ್ಲದರ ನಡುವೆ, ಪಂದ್ಯದ ನಾಲ್ಕನೇ ದಿನದ ಆಟವನ್ನು ಮಳೆಯಿಂದಾಗಿ ಸುಮಾರು ಒಂದು ಗಂಟೆ ಮುಂಚಿತವಾಗಿ ನಿಲ್ಲಿಸಬೇಕಾಯಿತು. ಆದರೆ ಅಂಪೈರ್ಗಳ ಈ ನಡೆಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ತೀವ್ರ ಅಸಮಾಧಾನಗೊಂಡಿಲ್ಲದೆ, ಮೈದಾನದಲ್ಲೇ ಅಂಪೈರ್ಗಳೊಂದಿಗೆ ತೀವ್ರ ವಾಗ್ವಾದ ನಡೆಸಿದರು.
ವಾಸ್ತವವಾಗಿ ಪಂದ್ಯದ ನಾಲ್ಕನೇ ದಿನ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾ ಕೆಳಕ್ರಮಾಂಕದ ವೈಫಲ್ಯದಿಂದಾಗಿ 462 ರನ್ಗಳಿಗೆ ಎರಡನೇ ಇನ್ನಿಂಗ್ಸ್ ಮುಗಿಸಿತು. ಅಂತಿಮವಾಗಿ ಕಿವೀಸ್ ತಂಡದ ಗೆಲುವಿಗೆ 107 ರನ್ಗಳ ಗುರಿ ಸಿಕ್ಕಿದೆ. ಹೀಗಾಗಿ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸಿದಾಗ ದಿನದ ಆಟಕ್ಕೆ ಇನ್ನೂ ಸುಮಾರು ಒಂದು ಗಂಟೆಯ ಆಟ ಬಾಕಿ ಇತ್ತು. ಈ ವೇಳೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದರಿಂದ ಟೀಂ ಇಂಡಿಯಾ ವೇಗಿಗಳಿಗೆ ಇದು ಶುಭ ಸೂಚನೆಯಾಗಿತ್ತು. ಏಕೆಂದರೆ ಮೋಡ ಕವಿದ ವಾತಾವರಣವಿದ್ದಾಗ ಪಿಚ್ ವೇಗಿಗಳಿಗೆ ಹೆಚ್ಚಾಗಿ ನೆರವಾಗುತ್ತದೆ.
ಹೀಗಾಗಿ ಇದರ ಲಾಭ ಪಡೆಯುವ ಸಲುವಾಗಿ ನಾಯಕ ರೋಹಿತ್ ಶರ್ಮಾ, ಬುಮ್ರಾಗೆ ಬೌಲಿಂಗ್ ದಾಳಿ ಆರಂಭಿಸುವ ಜವಬ್ದಾರಿ ನೀಡಿದರು. ಆದರೆ ಬುಮ್ರಾ ಕೇವಲ 4 ಎಸೆತಗಳನ್ನು ಎಸೆದ ಬಳಿಕ ಲೈಟ್ ಮೀಟರ್ನಿಂದ ಲೈಟ್ ಅನ್ನು ಪರೀಕ್ಷಿಸಿ ಅಂಪೈರ್ಗಳು ಆಟವನ್ನು ನಿಲ್ಲಿಸಲು ನಿರ್ಧರಿಸಿದರು. ಹೀಗಾಗಿ ನ್ಯೂಜಿಲೆಂಡ್ನ ಆರಂಭಿಕರಿಬ್ಬರೂ ತಕ್ಷಣವೇ ಪೆವಿಲಿಯನ್ ಕಡೆಗೆ ತೆರಳಿದರು. ಆದರೆ ಫ್ಲಡ್ ಲೈಟ್ಗಳು ಆನ್ ಆಗಿದ್ದರೂ ಅಂಪೈರ್ಗಳು ದಿನದಾಟವನ್ನು ರದ್ದುಗೊಳಿಸಿದ್ದು, ಟೀಂ ಇಂಡಿಯಾ ಆಟಗಾರರನ್ನು ಕೆರಳಿಸುವಂತೆ ಮಾಡಿತು. ಕೂಡಲೇ ನಾಯಕ ರೋಹಿತ್ ಶರ್ಮಾ ಅಂಪೈರ್ಗಳಾದ ಪಾಲ್ ರೈಫಲ್ ಮತ್ತು ಮೈಕೆಲ್ ಗಾಫ್ ಅವರೊಂದಿಗೆ ವಾಗ್ವಾದ ಆರಂಭಿಸಿದರು
ಒಂದು ಓವರ್ ಪೂರ್ಣಗೊಳ್ಳದೆ ಆಟವನ್ನು ಏಕೆ ನಿಲ್ಲಿಸಿದಿರಿ ಎಂದು ರೋಹಿತ್, ಅಂಪೈರ್ ಬಳಿ ಪ್ರಶ್ನೆಗಳನ್ನು ಎತ್ತಲಾರಂಭಿಸಿದರು. ಅಂಪೈರ್ ಕೂಡ ತಮ್ಮ ನಿರ್ಧಾರಕ್ಕೆ ಕಾರಣವನ್ನು ವಿವರಿಸಲಾರಂಭಿಸಿದರು. ಇಡೀ ತಂಡ ಇಬ್ಬರೂ ಅಂಪೈರ್ಗಳನ್ನು ಸುತ್ತುವರೆದರೂ ಅಂಪೈರ್ಗಳು ಭಾರತ ತಂಡದ ಮಾತನ್ನು ಕೇಳದೆ ತಮ್ಮ ನಿರ್ಧಾರಕ್ಕೆ ಬದ್ಧರಾದರು. ಹೀಗಾಗಿ ಟೀಂ ಇಂಡಿಯಾ ಆಟಗಾರರು ಕೆಲ ಹೊತ್ತು ಮೈದಾನದಲ್ಲಿ ನಿಂತಿದ್ದರು. ಆದರೆ ಕೆಲವೇ ನಿಮಿಷಗಳ ಬಳಿಕ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದರಿಂದ ಅವರು ಸಹ ಮೈದಾನವನ್ನು ತೊರೆಯಬೇಕಾಯಿತು.