ಚಾಂಪಿಯನ್ ಟ್ರೋಫಿಯಲ್ಲಿ ಇಂದು ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್ ತಂಡವನ್ನು 44 ರನ್ಗಳಿಂದ ಸೋಲಿಸಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ನೆರವಿನಿಂದ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 249 ರನ್ ಗಳಿಸಿತು. ಆದರೆ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಪವರ್ ಪ್ಲೇ ಅಂತ್ಯಕ್ಕೂ ಮುನ್ನವೇ ಪ್ರಮುಖ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ಇದಾದ ನಂತರ ಶ್ರೇಯಸ್ ಮತ್ತು ಅಕ್ಷರ್ ಪಟೇಲ್ ನಾಲ್ಕನೇ ವಿಕೆಟ್ಗೆ 98 ರನ್ಗಳ ಜೊತೆಯಾಟ ನೀಡಿದರು. ಅಕ್ಷರ್ ಮತ್ತು ಶ್ರೇಯಸ್ ಔಟಾದ ನಂತರ ಭಾರತದ ಇನ್ನಿಂಗ್ಸ್ ಕುಸಿತ ಕಂಡಿತು.
ಭಾರತದ ಪರ ಶ್ರೇಯಸ್ 98 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ಗಳ ನೆರವಿನಿಂದ 79 ರನ್ ಗಳಿಸಿದರು. ಅವರಲ್ಲದೆ, ಹಾರ್ದಿಕ್ ಪಾಂಡ್ಯ 45 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್ಗಳ ಸಹಾಯದಿಂದ 45 ರನ್ಗಳ ಕಾಣಿಕೆ ನೀಡಿದರು. ಆಲ್ರೌಂಡರ್ ಅಕ್ಷರ್ ಪಟೇಲ್ ಕೂಡ 61 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 42 ರನ್ ಬಾರಿಸಿದರೆ, ಕೆಎಲ್ ರಾಹುಲ್ 23 ರನ್, ರವೀಂದ್ರ ಜಡೇಜಾ 16 ರನ್, ನಾಯಕ ರೋಹಿತ್ ಶರ್ಮಾ 15 ರನ್ಗಳ ಇನ್ನಿಂಗ್ಸ್ ಆಡಿದರು. 300 ನೇ ಏಕದಿನ ಪಂದ್ಯವನ್ನು ಆಡುತ್ತಿದ್ದ ವಿರಾಟ್ ಕೊಹ್ಲಿ 11 ರನ್ ಗಳಿಸಿದರೆ, ಮೊಹಮ್ಮದ್ ಶಮಿ 5 ರನ್, ಶುಭ್ಮನ್ ಗಿಲ್ ಎರಡು ರನ್ ಗಳಿಸಲಷ್ಟೇ ಶಕ್ತರಾದರು.
ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ ಎಂಟು ಓವರ್ಗಳಲ್ಲಿ 42 ರನ್ ನೀಡಿ ಐದು ವಿಕೆಟ್ಗಳನ್ನು ಪಡೆದರೆ, ಕೈಲ್ ಜೇಮಿಸನ್, ವಿಲಿಯಂ ಒ’ರೂರ್ಕ್, ಮಿಚೆಲ್ ಸ್ಯಾಂಟ್ನರ್ ಮತ್ತು ರಾಚಿನ್ ರವೀಂದ್ರ ತಲಾ ಒಂದು ವಿಕೆಟ್ ಪಡೆದರು. ಗುರಿಯನ್ನು ಬೆನ್ನಟ್ಟಿದ ಕಿವೀಸ್ ಕೂಡ ಟೀಂ ಇಂಡಿಯಾ ವೇಗಿಗಳು ಕಾಟ ನೀಡಿದರು. ಆಗಾಗ್ಗೆ ವಿಕೆಟ್ಗಳನ್ನು ಕಳೆದುಕೊಂಡ ನ್ಯೂಜಿಲೆಂಡ್ ಪೂರ್ಣ 20 ಓವರ್ಗಳನ್ನು ಆಡಲು ಸಾಧ್ಯವಾಗದೆ 45.3 ಓವರ್ಗಳಲ್ಲಿ 205 ರನ್ಗಳಿಗೆ ಆಲೌಟ್ ಆಯಿತು. ಕಿವೀಸ್ ಪರ ಕೇನ್ ವಿಲಿಯಮ್ಸನ್ 81 ರನ್ ಬಾರಿಸಿದರು. ವಿಲಿಯಮ್ಸನ್ ಹೊರತುಪಡಿಸಿ, ನ್ಯೂಜಿಲೆಂಡ್ನ ಯಾವುದೇ ಬ್ಯಾಟ್ಸ್ಮನ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ನಾಯಕ ಮಿಚೆಲ್ ಸ್ಯಾಂಟ್ನರ್ 28 ರನ್, ಟಾಮ್ ಲ್ಯಾಥಮ್ 14, ಡ್ಯಾರಿಲ್ ಮಿಚೆಲ್ 17, ವಿಲ್ ಯಂಗ್ 22, ರಾಚಿನ್ ರವೀಂದ್ರ 6, ಗ್ಲೆನ್ ಫಿಲಿಪ್ಸ್ 12 ಮತ್ತು ಮ್ಯಾಟ್ ಹೆನ್ರಿ 2 ರನ್ ಕಲೆಹಾಕಲಷ್ಟೇ ಶಕ್ತರಾದರು.
ಭಾರತ ಪರ ವರುಣ್ ಅದ್ಭುತ ಪ್ರದರ್ಶನ ನೀಡಿ 10 ಓವರ್ಗಳಲ್ಲಿ 42 ರನ್ಗಳಿಗೆ ಐದು ವಿಕೆಟ್ಗಳನ್ನು ಪಡೆದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಇದು ವರುಣ್ ಅವರ ಮೊದಲ ಪಂದ್ಯವಾಗಿದ್ದು, ಅವಕಾಶ ಸಿಕ್ಕ ಮೊದಲ ಪಂದ್ಯದಲ್ಲೇ ವರುಣ್ ಮಿಂಚುವಲ್ಲಿ ಯಶಸ್ವಿಯಾದರು