ಶನಿವಾರ ನಡೆದ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ಸುದೀಪ್ ಅವರಿಂದ ಪ್ರತಿವಾರದಂತೆ ಈ ವಾರವೂ ಕೂಡ ಹೆಚ್ಚಿನ ಕ್ಲಾಸ್ ಪಡೆದುಕೊಂಡಿದ್ದಾರೆ.
ವೀಕ್ಷಕರ ಪ್ರಕಾರ ಯಾರು ಹೇಗೆಲ್ಲಾ ಕಾಣಿಸುತ್ತಿದ್ದಾರೆ ಹೊರಗಡೆ ಎಂಬುದನ್ನು ಆಯಾ ಸ್ಪರ್ಧಿಗಳಿಗೆ ಸುದೀಪ್ ಸರಳವಾಗಿ ತಿಳಿ ಹೇಳಿದ್ದಾರೆ. ಈ ಮಧ್ಯೆ ಮೈಕಲ್ಗೆ ಕಿಚ್ಚನ ಚಪ್ಪಾಳೆ ಕೊಟ್ಟ ಕಿಚ್ಚ, ಅವರ ಪ್ರಯತ್ನವನ್ನು ಮೆಚ್ಚಿ ಮಾತನಾಡಿದ್ದಾರೆ.
ಶನಿವಾರದ ಕಿಚ್ಚನ ಪಂಚಾಯಿತಿಗಾಗಿ ಈ ಬಾರಿ ಹೆಚ್ಚಿನ ಕಾತರದಿಂದ ಕಾದಿದ್ದು ಮನೆಯ ಸದಸ್ಯರಿಗಿಂತ ವೀಕ್ಷಕರು ಎಂಬುದರಲ್ಲಿ ಅನುಮಾನವೇ ಇಲ್ಲ. ಕಾರಣ ಈ ವಾರದ ಆರಂಭದಿಂದಲೂ ಸ್ಪರ್ಧಿಗಳ ಮಧ್ಯೆ ಭಾರೀ ಜಟಾಪಟಿ, ಮಾತಿನ ಚಕಮಕಿ, ಹೊಡೆದಾಟ ಮಾಡಿಕೊಳ್ಳುವಷ್ಟು ಮಿತಿ ಮೀರಿದ ವರ್ತನೆ ವೀಕ್ಷಕರಲ್ಲಿ ಭಾರೀ ಗೊಂದಲ ಮೂಡಿಸಿತ್ತು. ಈ ವಿಚಾರಗಳ ಕುರಿತು ಯಾರದು ತಪ್ಪು? ಯಾರದು ಸರಿ? ಎಂಬ ಸಂಗತಿಗಳನ್ನು ಸುದೀಪ್ ಹೇಗೆ ತಿಳಿಸಲಿದ್ದಾರೆ ಎಂಬ ಕುತೂಹಲ ತೀವ್ರವಾಗಿತ್ತು.
ಸ್ಪರ್ಧಿಗಳಿಗೆ ಕಿಚ್ಚನ ಕ್ಲಾಸ್ ಎಂದಿನಂತೆ ಈ ವಾರವೂ ಖಡಕ್ ಆಗಿಯೇ ಇತ್ತು. ಸ್ಪರ್ಧಿಗಳಿಗೆ ಕೆಲವು ಸಂಗತಿಗಳನ್ನು ಸಂದರ್ಭಗಳ ಸಹಿತ ವಿವರಿಸಿದ ಸುದೀಪ್, ಅವರವರ ತಪ್ಪನ್ನು ಸೂಕ್ತ ಕಾರಣಗಳ ಮೂಲಕ ತಿಳಿ ಹೇಳಿದರು.
ಇದೆಲ್ಲದರ ಮಧ್ಯೆಯೇ ಪ್ರತಿವಾರ ಒಬ್ಬ ಸ್ಪರ್ಧಿಗೆ ತಮ್ಮ ಕಿಚ್ಚನ ಚಪ್ಪಾಳೆ ಕೊಡುವಂತೆ ಈ ವಾರ ಮೈಕಲ್ಗೆ ತಮ್ಮ ಚಪ್ಪಾಳೆಯನ್ನು ಸುದೀಪ್ ಕೊಟ್ಟರು. ಇದಕ್ಕೆ ಕಾರಣ ತಿಳಿಸಿದ ಕಿಚ್ಚ, ಟಾಸ್ಕ್ ವೇಳೆ ತೆಗೆದುಕೊಂಡ ನಿರ್ಧಾರ, ಆಟವಾಡಿದ ವೈಖರಿ ಮತ್ತು ಹೆಚ್ಚಾಗಿ ಮನೆಯೊಳಗೆ ಇಂಗ್ಲಿಷ್ ಬದಲು ಕನ್ನಡ ಪದಗಳ ಬಳಕೆಗೆ ಕೊಡುತ್ತಿರುವ ಆದ್ಯತೆ ನನಗೆ ಇಷ್ಟವಾಯಿತು ಎಂದರು.