ಮಂಡ್ಯ :- ಕ್ರೀಡೆ, ಸಂಸ್ಕೃತಿ ಉಳಿಸುವ ಜತೆಗೆ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ನವಂಬರ್ 9 ರಂದು ಮದ್ದೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಅರ್ಜುನಪುರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎನ್.ಆರ್.ಪ್ರಸನ್ನ ತಿಳಿಸಿದರು.
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಣದ ಜತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ವಿಚಾರಗಳು ಎಲ್ಲರಿಗೂ ಮುಖ್ಯವಾಗಿರುವುದರಿಂದ ಕ್ರೀಡಾಪಟುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಂಘವನ್ನು ಉದ್ಘಾಟನೆ ಮಾಡಲಾಗುತ್ತಿದೆ ಎಂದರು.
Friday Tips: ಶುಕ್ರವಾರ ಬೆಳಗ್ಗೆ ಈ ಕೆಲಸ ಮಾಡಿದರೆ ಬೇಡವೆಂದರೂ ಧನ ಲಕ್ಷ್ಮಿ ಒಲಿಯುವಳು.!
ಸಂಘದ ವತಿಯಿಂದ ತಾಲೂಕಿನ ಎಲ್ಲಾ ಕ್ರೀಡಾಪಟುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ ಹಾಗೂ ಮುಂದಿನ ದಿನಗಳಲ್ಲಿ ತಾಲೂಕಿನ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ನೀಟ್, ಕೆಎಎಸ್, ಐಪಿಎಸ್ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಉಚಿತವಾಗಿ ತರಬೇತಿ ಕೊಡಿಸುವುದು ಸಂಘದ ಮುಖ್ಯ ಉದ್ದೇಶವಾಗಿದೆ ಎಂದರು.
ಮದ್ದೂರು ತಾಲೂಕಿನಿಂದ ಆಯ್ಕೆಯಾದ ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾಪಟುಗಳಿಗೆ ಯಾವುದೇ ಕ್ರೀಡೆ ಆದರೂ ಸಹ ಅವರಿಗೆ ಸಂಘದ ವತಿಯಿಂದ ತರಬೇತಿ ನೀಡಿ ಅವರ ಮುಂದಿನ ಹಂತಕ್ಕೆ ಹೋಗಲು ಅನುಕೂಲ ಕಲ್ಪಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಘವನ್ನು ರಾಷ್ಟ್ರೀಯ ಕಬಡ್ಡಿ ಆಟಗಾರ ಹಾಗೂ ಮೈಸೂರು ವಿಶ್ವ ವಿದ್ಯಾನಿಲಯದ ಕಬಡ್ಡಿ ನಾಯಕ ವಿ.ಕೆ.ಹರೀಶ್ ಅವರು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮಕ್ಕೆ ತಾಲೂಕಿನ ಜನಪ್ರತಿನಿಧಿಗಳು, ಸಮಾಜ ಸೇವಕರು, ಚಿಂತಕರು, ಕ್ರೀಡಾಭಿಮಾನಿಗಳು, ವಿದ್ಯಾರ್ಥಿಗಳು, ಸೇರಿದಂತೆ ಎಲ್ಲಾ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆಂದರು.
ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಶೈಕ್ಷಣಿಕ, ಆರೋಗ್ಯ, ಕ್ರೀಡೆ ಸೇರಿದಂತೆ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಕೂಲ ಕಲ್ಪಿಸಲು ಸಂಘ ಬದ್ಧವಾಗಿದೆ ಎಂದರು. ಇದೇ ವೇಳೆ ಸಂಘದ ಉಪಾಧ್ಯಕ್ಷ ಆರ್.ವಿ.ಅವಿನಂದನ್, ಕಾರ್ಯದರ್ಶಿ ವಿ.ಎನ್.ಶಂಕರ್, ಕ್ರೀಡಾ ಕಾರ್ಯದರ್ಶಿ ಎಂ.ಎನ್.ದೀಪಕ್, ನಿರ್ದೇಶಕ ಎಂ.ವಿಶ್ವನಾಥ್ ಇದ್ದರು.