ಹುಬ್ಬಳ್ಳಿ : 15 ವರ್ಷದ ನಂತರ ಕಾನೂನು ವಿಶ್ವವಿದ್ಯಾಲಯಕ್ಕೆ ಮುಖ್ಯ ಕಟ್ಟಡದ ಭಾಗ್ಯ ದೊರೆತಿದೆ. 2025 ರ ಆಗಸ್ಟ್ ನಲ್ಲಿ ಆಡಳಿತ ಭವನ ಕಟ್ಟಡವನ್ನು ಉದ್ಘಾಟಿಸಲಾಗುವುದು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ನ
ಪಾಟೀಲ ಹೇಳಿದರು.
ಇಂದು ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಟ್ಟಡದ ಶಂಕು ಸ್ಥಾಪನೆ, ಕಾನೂನು ಶಾಲೆಯ ಸಭಾಂಗಣ, ಕಲ್ಪಿತ ನ್ಯಾಯಾಲಯ ಸಭಾಂಗಣ ಹಾಗೂ ಪರೀಕ್ಷಾ ಭವನದ ಎರಡನೇ ಮಹಡಿಯ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ವಿಶ್ವವಿದ್ಯಾಲಯದಲ್ಲಿ ಮೊದಲು 180 ವಿದ್ಯಾರ್ಥಿಗಳನ್ನು ಮಾತ್ರ ದಾಖಲಾತಿ ಮಾಡಿಕೊಳ್ಳಲು ಅವಕಾಶವಿತ್ತು. ತದನಂತರದಲ್ಲಿ 300 ವಿದ್ಯಾರ್ಥಿಗಳನ್ನು ಹೆಚ್ಚುವರಿಯಾಗಿ ದಾಖಲಾತಿ ಮಾಡಿಕೊಳ್ಳಲಾಯಿತು. ಆ ಮೂಲಕ 480 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಯಿತು. ತಮ್ಮದೇ ಹಣದಿಂದ ಸ್ವಾವಲಂಬಿಯಾಗಿ ವಿಶ್ವವಿದ್ಯಾಲಯ ಸ್ಥಾಪಿಸಿದ ಕೀರ್ತೀ ಕಾನೂನು ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಸುದೈವಿಗಳು. ಕಾನೂನು ಅಧ್ಯಯನ ಮಾಡಿದವರಿಗೆ ಸರ್ಕಾರಿ, ಖಾಸಗಿ ಕಂಪನಿಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯಲಿವೆ. ಕಾನೂನು ಅಧ್ಯಯನ ಮಾಡಿದವರು ಭರವಸೆಯ ಆಶಾದಾಯಕ ಬದುಕು ಕಟ್ಟಿಕೊಳ್ಳಬಹುದು ಎಂದರು.
ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯ ಮುಂದಿದೆ. ದೇಶದಲ್ಲಿ 3 ಕೋಟಿ ವ್ಯಾಜ್ಯಗಳು ಬಾಕಿಯಿವೆ. ಇಂದು ಮನೆ ಮನೆಗೆ ಸಂವಿಧಾನವನ್ನು ತಲುಪಿಸುವ ಕಾರ್ಯಗಳು ನಡೆಯುತ್ತಿವೆ. ಬದುಕಿನಲ್ಲಿ ಕಾನೂನು ಪ್ರಮುಖ ಪಾತ್ರ ವಹಿಸುತ್ತದೆ. ಕಾನೂನಿನ ಬಗ್ಗೆ ಎಲ್ಲರೂ ಅರಿತುಕೊಳ್ಳುವುದು ಅವಶ್ಯಕವಾಗಿದೆ. ನಮ್ಮ ಸಂವಿಧಾನ ಬಹಳ ಶಕ್ತಿಯುತವಾಗಿದೆ. ಜನರನ್ನು ಜಾಗೃತಗೊಳಿಸುವ ಶಕ್ತಿ ಸಂವಿಧಾನಕ್ಕಿದೆ. ವಿದ್ಯಾರ್ಥಿಗಳು ಸಂವಿಧಾನ, ಕಾನೂನು ಓದುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಲಿ. ರಾಷ್ಟ್ರೀಯ ಕಾನೂನು ಶಾಲೆಯನ್ನು ಮೀರಿಸುವ ವಿಶ್ವವಿದ್ಯಾಲಯವಾಗಿ ಬೆಳೆಯಬೇಕು ಎಂದು ಶುಭ ಹಾರೈಸಿದರು.
ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಬ್ಬಯ್ಯ ಪ್ರಸಾದ ಮಾತನಾಡಿ, 39 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗುವುದು. ಕಾನೂನು ವಿಶ್ವವಿದ್ಯಾಲಯದಂತೆ ಕರ್ನಾಟಕ ವಿಶ್ವವಿದ್ಯಾಲಯವನ್ನು ಉಳಿಸಿ ಬೆಳೆಸುವ ಕೆಲಸಗಳಾಗಬೇಕಿವೆ. ರೂ.120 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ತಾಲೂಕು ನ್ಯಾಯಾಲಯವನ್ನು ನಿರ್ಮಿಸಲಾಯಿತು. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗ ಎಂಬ ನಾಲ್ಕು ಅಂಗಗಳಿವೆ. ನ್ಯಾಯಾಂಗವು ಎಲ್ಲ ಅಂಗಗಳಿಗಿಂತ ಹೆಚ್ಚಿನ ಶಕ್ತಿಯನ್ನು ಹೊಂದಿದೆ. ದೇಶದಲ್ಲಿ ಇಂದು 63 ಲಕ್ಷ ಮೊಕದ್ದಮೆಗಳು ಬಾಕಿಯಿವೆ. ಗುಣಮಟ್ಟದ ವಕೀಲರನ್ನು ನಿರ್ಮಿಸುವಲ್ಲಿ ವಿಶ್ವವಿದ್ಯಾಲಯ ಮುಂದಾಗಬೇಕು. ದೇಶದಲ್ಲೇ ಮಾದರಿಯಾದ ಕಾನೂನು ವಿಶ್ವವಿದ್ಯಾಲಯ ಇದಾಗಬೇಕು ಎಂದು ಆಶಿಸಿದರು.
ಶಾಸಕರಾದ ಅರವಿಂದ ಬೆಲ್ಲದ ಮಾತನಾಡಿ, ವಿಶ್ವವಿದ್ಯಾಲಯವು 56 ಎಕರೆ ಪ್ರದೇಶದ ಕ್ಯಾಂಪಸ್ ವನ್ನು ಹೊಂದಿದೆ. ಬೆಂಗಳೂರಿನ ಐಐಎಂ ಕ್ಯಾಂಪಸ್ ನಷ್ಟೇ ವಿದ್ಯಾರ್ಥಿಗಳ ಪ್ರವೇಶವನ್ನು ವಿಶ್ವವಿದ್ಯಾಲಯ ಹೊಂದಿರುವುದು ಗಮನಾರ್ಹ ಸಂಗತಿ. ಗ್ಯಾರಂಟಿ ಯೋಜನೆಗಳಿಗೆ ಖರ್ಚಾಗುವ ಹಣಕ್ಕಿಂತಲೂ ಶಿಕ್ಷಣಕ್ಕೆ ಹೆಚ್ಚು ಅನುದಾನ ಖರ್ಚಾಗುತ್ತದೆ. ಕಾನೂನಿನ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಮಾಡಿ, ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಲು ಮುಂದಾಗಬೇಕಿದೆ ಎಂದು ತಿಳಿಸಿದರು.
ಸಹಾಯಕ ಕುಲಸಚಿವರಾದ ಸುನೀಲ ಬಾಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 2009 ರಲ್ಲಿ ಕಾನೂನು ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಗುಣಮಟ್ಟದ ಕಾನೂನು ಶಿಕ್ಷಣವನ್ನು ನೀಡಲಾಗುತ್ತಿದೆ. ವಿಶ್ವವಿದ್ಯಾಲಯ ತನ್ನದೇ ಆದ ಛಾಪು ಮೂಡಿಸುತ್ತಿದೆ ಎಂದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.(ಡಾ)ಸಿ. ಬಸವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ಸಚಿವರಾದ ಎ.ಎಂ.ಹಿಂಡಸಗೇರಿ,
ಪಾಲಿಕೆಯ ವಿರೋಧ ಪಕ್ಷದ ನಾಯಕಿ ಸುವರ್ಣಾ ಕಲ್ಲಕುಂಟ್ಲ, ಪಾಲಿಕೆ ಸದಸ್ಯೆಯರಾದ ನೀಲವ್ವ ಅರವಾಳದ,
ಕುಲಸಚಿವೆ ಅನುರಾಧಾ ವಸ್ತ್ರದ, ಮೌಲ್ಯಮಾಪನ ಕುಲಸಚಿವೆ ಪ್ರೊ.(ಡಾ.) ರತ್ನಾ ಭರಮಗೌಡರ, ಚಿದಾನಂದ ಪಾಟೀಲ, ಸಿಂಡಿಕೇಟ್ ಸದಸ್ಯರು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಇತರರು ಉಪಸ್ಥಿತರಿದ್ದರು.
ಪ್ರಮತಿ ಪ್ರಾರ್ಥಿಸಿದರು. ಕಾನೂನು ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಪ್ರಸ್ತುತ ಪಡಿಸಿದರು. ಚಿನ್ನಮ್ಮ ನಿರೂಪಿಸಿದರು.