ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದ ಬಳಿ ನಡೆಯುತ್ತಿರುವ
ಮೇಲೇತುವೆ ಹಾಗೂ ಸ್ಮಾರ್ಟ್ಸಿಟಿ ಯೋಜನೆಯಡಿಯ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡದ ಕಾಮಗಾರಿಯ ಪ್ರಗತಿಯನ್ನು ಶುಕ್ರವಾರ ಸಂಜೆ ಶಾಸಕ ಮಹೇಶ ಟೆಂಗಿನಕಾಯಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಪರಿಶೀಲಿಸಿದರು. ಕಾಲಮಿತಿಯಲ್ಲಿ ಕಾಮಗಾರಿ ಮುಗಿಯದಿರುವುದನ್ನು ತಿಳಿದು ತರಾಟೆ ತೆಗೆದುಕೊಂಡರು.
ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡ ಆರಂಭವಾಗಿ ಏಳು ವರ್ಷ ಕಳೆದಿವೆ. ಇನ್ನೂ ಶೇ 30ರಷ್ಟು ಕಾಮಗಾರಿ ಮುಕ್ತಾಯವಾಗಿಲ್ಲ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಬೇರೆಯವರಿಗೆ ಕಾಮಗಾರಿ ನೀಡಿ. ಅದು ಸಾಧ್ಯವಾಗದಿದ್ದರೆ ಅರ್ಧಮರ್ಧವಾದ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಆ ಜಾಗ ಮುಚ್ಚಿಬಿಡಿ. ಸಾರ್ವಜನಿಕರಿಗೆ ತೊಂದರೆ ಕೊಡುವುದು ತಪ್ಪುತ್ತದೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
₹40 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಸಹಕಾರಿ ಸಹಭಾಗಿತ್ವದಲ್ಲಿ (ಪಿಪಿಪಿ ಮಾದರಿ) ಕಾರ್ ಪಾರ್ಕಿಂಗ್ ಕಟ್ಟಡ ಕಾಮಗಾರಿ ನಡೆಯುತ್ತಿದೆ. ವಿಳಂಬ ಕುರಿತು ಗುತ್ತಿಗೆದಾರರಿಗೆ ಈಗಾಗಲೇ ₹2 ಕೋಟಿ ದಂಡ ಹಾಕಲಾಗಿದೆ. ಈ ಹಂತದಲ್ಲಿ ಬೇರೆಯವರು ಗುತ್ತಿಗೆ ಪಡೆಯಲು ಮುಂದೆ ಬರುವುದಿಲ್ಲ. ಅನಿವಾರ್ಯವಾಗಿ ಈಗಿನ ಗುತ್ತಿಗೆದಾರರಿಗೆ ಒತ್ತಡ ಹಾಕಿ ಕಾಮಗಾರಿ ಪೂರ್ಣಗೊಳಿಸಬೇಕಿದೆ’ ಎಂದು ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಘಾಳಿ ಹೇಳಿದರು.
ಇದೇ ವೇಳೆ ಚನ್ನಮ್ಮ ವೃತ್ತದ ಬಳಿಯ ಯುರೇಕಾ ಟಾವರ್ ವ್ಯಾಪಾರಸ್ಥರು ಶಾಸಕರಿಗೆ ಮನವಿ ಪತ್ರ ಸಲ್ಲಿಸಿ, ‘ಮೇಲೇತುವೆ ಕಾಮಗಾರಿಗೆ ಕಟ್ಟಡದ ಕೆಲವು ಜಾಗ ಸ್ವಾಧೀನವಾಗುತ್ತದೆ ಎಂದು ಗುರುತು ಹಾಕಲಾಗಿದೆ. ವ್ಯಾಪಾರದ ಪ್ರಮುಖ ಕಟ್ಟಡವಾಗಿರುವುದರಿಂದ ಸ್ವಾಧೀನವಾದರೆ ವಾಹನ ನಿಲುಗಡೆಗೆ ತೀವ್ರ ಸಮಸ್ಯೆಯಾಗುತ್ತದೆ. ಎದುರುಗಡೆ ಭಾಗ ಸರ್ಕಾರಿ ಜಾಗವಾಗಿದ್ದು, ಅಲ್ಲಿಯೇ ಹೆಚ್ಚುವರಿ ಸ್ವಾಧೀನ ಮಾಡಿಕೊಳ್ಳಬೇಕು’ ಎಂದರು