ಅಮೆರಿಕದ ಮಿಸ್ಸೋರಿಯಲ್ಲಿ ಫೆಬ್ರವರಿ 20ರಂದು ಮನೆಗೆ ಬೆಂಕಿ ಬಿದ್ದು 5 ಮಂದಿ ಜೀವಂತ ದಹನಗೊಂಡ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಘಟನೆಯಲ್ಲಿ ಮೃತಪಟ್ಟ ಮಹಿಳೆಯೇ ಮನೆಗೆ ಬೆಂಕಿ ಹಚ್ಚಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶಿಕ್ಷಕಿಯಾಗಿರುವ ಬೆರ್ನಾಡಿನ್ ಪ್ರುಸ್ನರ್ (39 ವರ್ಷ) ಉದ್ದೇಶಪೂರ್ವಕವಾಗಿ ಹಾಸಿಗೆಗೆ ಅಗ್ನಿಸ್ಪರ್ಷ ಮಾಡಿದ್ದು ಬೆಂಕಿ ತಕ್ಷಣ ಸಂಪೂರ್ಣ ಮನೆಗೆ ವ್ಯಾಪಿಸಿದೆ. ಈ ವೇಳೆ ಮನೆಯಲ್ಲಿದ್ದ 5 ಮಂದಿ ಅಗ್ನಿಯ ಕೆನ್ನಾಲಿಗೆಗೆ ಆಹುತಿಯಾಗಿದ್ದಾರೆ.
9 ವರ್ಷದ ಅವಳಿ ಮಕ್ಕಳಾದ ಎಲೀ ಮತ್ತು ಐವಿ, 6 ವರ್ಷದ ಜಾಕ್ಸನ್ ಹಾಗೂ 2 ವರ್ಷದ ಮಿಲೀ ಬೆಂಕಿಯಲ್ಲಿ ದಹನಗೊಂಡಿದ್ದರು. ಬೆಂಕಿ ಹಚ್ಚಿದ್ದ ಪ್ರುಸ್ನರ್ ಕೂಡಾ ಮೃತಪಟ್ಟಿದ್ದಳು. ಆರಂಭದಲ್ಲಿ ಇದು ಅಕಸ್ಮಾತ್ ಆದ ದುರಂತ ಎಂದು ಪೊಲೀಸರು ಶಂಕಿಸಿದ್ದರು. ಆದರೆ ದುರ್ಘಟನೆ ನಡೆಯುವ ಒಂದು ದಿನ ಮೊದಲು ಪ್ರುಸ್ನರ್ ಸಾಮಾಜಿಕ ಮಾಧ್ಯಮದಲ್ಲಿ `ನಾವು ಪ್ರಪಂಚದ ವಿರುದ್ಧ. ನಿಮ್ಮ ತಾಯಿಯಾಗಿರುವುದು ನನ್ನ ಸೌಭಾಗ್ಯ’ ಎಂದು ಮಕ್ಕಳನ್ನು ಉದ್ದೇಶಿಸಿ ಪೋಸ್ಟ್ ಮಾಡಿದ್ದರು.
2017ರಲ್ಲಿ ಪುಸ್ನರ್ ಪತಿ ಡೇವಿಡ್ ಪ್ರುಸ್ನರರ್ ನಿಂದ ವಿಚ್ಛೇದನ ಪಡೆದಿದ್ದರು. ಮಕ್ಕಳ ಪೋಷಣೆಯನ್ನು ಜಂಟಿಯಾಗಿ ನಿರ್ವಹಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಕಳೆದ ವರ್ಷ ಬೇರೆಡೆಗೆ ಸ್ಥಳಾಂತರಗೊಳ್ಳುವ ಬೆರ್ನಾಡಿನ್ ನಿರ್ಧಾರವನ್ನು ಡೇವಿಡ್ ವಿರೋಧಿಸಿ ಮಕ್ಕಳ ಪೋಷಣೆಯ ಖರ್ಚು ನೀಡಲು ನಿರಾಕರಿಸಿದ್ದ. ಈ ಬಗ್ಗೆ ಬೆರ್ನಾಡಿನ್ ಮತ್ತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಪ್ರಕರಣದ ವಿಚಾರಣೆ ಮುಂದುವರಿದಿದೆ. ಈ ಮಧ್ಯೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಅವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರುವುದು ತನಿಖೆಯಿಂದ ಸ್ಪಷ್ಟವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.