ಪಾಕಿಸ್ತಾನ ಮಾಜಿ ಪ್ರಧಾನಿ, ಕ್ರಿಕೆಟಿಗ ಇಮ್ರಾನ್ ಖಾನ್ ಪತ್ನಿ ಜೈಲಿನಲ್ಲಿ ಅಸ್ವಸ್ಥರಾಗಿದ್ದಾರೆ ಎಂದು ಆಕೆಯ ಸಹೋದರಿ ದೂರು ನೀಡಿದ್ದಾರೆ.
ನನ್ನ ಸಹೋದರಿಗೆ ಜೈಲಿನಲ್ಲಿ ವಿಷಾಹಾರ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಆಕೆ ಅಸ್ವಸ್ಥಳಾಗಿದ್ದಾಳೆ ಎಂದು ದೂರಿದ್ದಾರೆ. ಅಧಿಕಾರಿಗಳು ನಮ್ಮ ಅಳಲು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಆಕೆಯನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಸಹೋದರಿ ಮರ್ಯಮ್ ರಿಯಾಝ್ ಆರೋಪಿಸಿದ್ದಾರೆ.
ಇಮ್ರಾನ್ ಅವರ ಮೂರನೇ ಪತ್ನಿ ಬುಶ್ರಾ ಬೀಬಿಗೆ ಅಕ್ರಮ ವಿವಾಹಕ್ಕಾಗಿ 14 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಸಂಬಂಧ ಅವರು ಅಡಿಯಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದೀಗ ಜೈಲಿನಲ್ಲಿ ಆಕೆಗೆ ಸಮರ್ಪಕವಲ್ಲದ ಆಹಾರ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ನನ್ನ ಸಹೋದರಿಗೆ ಸಮರ್ಪಕವಲ್ಲದ ಆಹಾರ ನೀಡಲಾಗುತ್ತಿದೆ. ಆಕೆ ಕೆಲವು ದಿನಗಳಿಂದ ನೋವಿನಲ್ಲಿದ್ದಾಳೆ. ಕಳೆದ ಆರು ದಿನಗಳಿಂದ ಏನೂ ತಿನ್ನಲಾಗದ ಸ್ಥಿತಿಯಲ್ಲಿದ್ದಾಳೆ. ಆಕೆಗೆ ಮನೆ ಆಹಾರ ನೀಡಲೂ ನಿರಾಕರಿಸಲಾಗುತ್ತಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಮರ್ಯಮ್ ಆಗ್ರಹಿಸಿದ್ದಾರೆ.
ನನ್ನ ಸಹೋದರಿ ಯಾವತ್ತೂ ಖಾನ್ ಸಾಹಿಬ್ (ಇಮ್ರಾನ್ ಖಾನ್) ಜೊತೆಯಲ್ಲೇ ಇರುತ್ತಾಳೆ. ಯಾವತ್ತೂ ಅವರ ಕೈಬಿಡಲ್ಲ ಎಂದಿದ್ದಾರೆ. ಆಕೆಯ ಮೇಲೆ ಜೈಲಿನಲ್ಲಾಗುತ್ತಿರುವ ದೌರ್ಜನ್ಯದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.