ಪಾಕಿಸ್ತಾನದ ಮುಂದಿನ ಪ್ರಧಾನಿಯ ಕುರಿತು ದಿನಕ್ಕೊಂದು ಸುದ್ದಿಗಳು ಕೇಳಿ ಬರುತ್ತಿದೆ. ಇದೀಗ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಪ್ರಧಾನ ಕಾರ್ಯದರ್ಶಿ ಒಮರ್ ಅಯೂಬ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಗುರುವಾರ ಘೋಷಿಸಿದೆ.
ರಾವಲ್ಪಿಂಡಿಯ ಅಡಿ/ಯಾಲಾ ಜೈಲಿನ ಹೊರಗೆ ಇಮ್ರಾನ್ ಅವರೊಂದಿಗೆ ಮಾತನಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಿಟಿಐ ನಾಯಕ ಅಸದ್ ಖೈಸರ್ ಅಯೂಬ್ ಅವರ ಉಮೇದುವಾರಿಕೆಯನ್ನು ಘೋಷಿಸಿದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಫೆಬ್ರವರಿ 8ರ ಗುರುವಾರ ನಡೆದ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೇಶವ್ಯಾಪಿ ಪ್ರತಿಭಟನಾ ಅಭಿಯಾನಕ್ಕೆ ಇಮ್ರಾನ್ ಖಾನ್ ದಿನಾಂಕವನ್ನು ನೀಡಲಿದ್ದಾರೆ ಎಂದು ಖೈಸರ್ ಹೇಳಿದ್ದಾರೆ. ಜಮಿಯತ್ ಉಲೇಮಾ-ಎ-ಇಸ್ಲಾಂ (ಎಫ್), ಅವಾಮಿ ನ್ಯಾಶನಲ್ ಪಾರ್ಟಿ ಮತ್ತು ಕ್ವಾಮಿ ವತನ್ ಪಾರ್ಟಿಯನ್ನು ಉಲ್ಲೇಖಿಸಿ ಫಲಿತಾಂಶಗಳ ವಿರುದ್ಧ ಪ್ರತಿಭಟಿಸುವ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ತೊಡಗಿಸಿಕೊಳ್ಳಲು ಪಕ್ಷವು ಪ್ರಯತ್ನಗಳನ್ನು ಮಾಡುತ್ತಿದೆ.
ಪಕ್ಷೇತರರು ಬೆಂಬಲ ನೀಡಿದ್ದರಿಂದ ಪಿಟಿಐ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.ಆದಾಗ್ಯೂ, ಪಕ್ಷೇತರರು 101 ರಾಷ್ಟ್ರೀಯ ಅಸೆಂಬ್ಲಿ ಸ್ಥಾನಗಳನ್ನು ಗೆದ್ದರೂ , ಸರ್ಕಾರವನ್ನು ಮಾನ್ಯತೆ ಪಡೆದ ಪಕ್ಷ ಅಥವಾ ಪಕ್ಷಗಳ ಒಕ್ಕೂಟದಿಂದ ಮಾತ್ರ ರಚಿಸಬಹುದು, ಆದ್ದರಿಂದ ಅವರು ಪರಿಣಾಮಕಾರಿ ಬ್ಲಾಕ್ ಆಗಲು ಮತ್ತೊಂದು ಗುಂಪನ್ನು ಸೇರಬೇಕಾಗುತ್ತದೆ. ನವಾಜ್ ಷರೀಫ್ ಅವರ ಪಿಎಂಎಲ್-ಎನ್ ಮತ್ತು ಬಿಲಾವಲ್ ಭುಟ್ಟೊ ಜರ್ದಾರಿ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಸಮ್ಮಿಶ್ರ ಸರ್ಕಾರವನ್ನು ರಚಿಸಲು ಪ್ರಯತ್ನಿಸುತ್ತಿರುವ ಮಧ್ಯೆ ಈ ಘೋಷಣೆ ಕೇಳಿ ಬಂದಿದೆ.
1970ರ ಜನವರಿ 26ರಂದು ಜನಿಸಿದ ಒಮರ್ ಅಯೂಬ್ ಪ್ರಸಿದ್ಧ ಅಯೂಬ್ ಖಾನ್ ಕುಟುಂಬಕ್ಕೆ ಸೇರಿದವರು. ಇವರ ತಾತ ಪಾಕಿಸ್ತಾನದ ಎರಡನೇ ಅಧ್ಯಕ್ಷರಾದ ಜನರಲ್ ಮುಹಮ್ಮದ್ ಅಯೂಬ್ ಖಾನ್. ಅವರ ತಂದೆ ಗೋಹರ್ ಅಯೂಬ್ ಖಾನ್ ಅವರು ಮಹತ್ವದ ರಾಜಕೀಯ ವೃತ್ತಿಜೀವನವನ್ನು ಹೊಂದಿದ್ದರು, ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು ವಿವಿಧ ಸಚಿವ ಸ್ಥಾನಗಳನ್ನು ಹೊಂದಿದ್ದರು.