ಬೆಂಗಳೂರು: ಜ.10:ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ ರಸ್ತೆಗಳ ಬದಿ ಭಗ್ನಾವಶೇಷಗಳನ್ನು ಹಾಕುವವರ ಮೇಲೆ ದಂಡ ವಿಧಿಸಿ ಕ್ರಮ ಕೈಗೊಳ್ಳಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ವೇಳೆ, ಸಾರ್ವಜನಿಕರೊಬ್ಬರು ಐಡಿಯಲ್ ಹೋಮ್ಸ್ ವ್ಯಾಪ್ತಿಯಲ್ಲಿ ರಸ್ತೆ ಬದಿ ಭಗ್ನಾವಶೇಷಗಳನ್ನು ರಸ್ತೆ ಬದಿ ಹಾಕಿರುವುದರಿಂದ ಓಡಾಟಕ್ಕೆ ಸಮಸ್ಯೆಯಾಗುತ್ತಿದ್ದು, ಅಂತಹವರ ಮೇಲೆ ಕ್ರಮ ಕೈಗೊಳ್ಳಲು ಮನವಿ ಮಾಡಿದರು.
ಅದಕ್ಕೆ ಮುಖ್ಯ ಆಯುಕ್ತರು ಪ್ರತಿಕ್ರಿಯಿಸಿ, ರಸ್ತೆ ಬದಿ ಯಾವುದೇ ಇಲಾಖೆಯಾಗಲಿ, ಸಾರ್ವಜನಿಕರಾಗಲಿ ರಸ್ತೆ ಬದಿ ಭಗ್ನಾವಶೇಷಗಳನ್ನು ಹಾಕುವಂತಿಲ್ಲ. ಈ ಸಂಬಂಧ ಬಿ.ಎಸ್.ಡಬ್ಲ್ಯೂ.ಎಂ.ಎಲ್ ನ ಅಧಿಕಾರಿಗಳು, ಮಾರ್ಷಲ್ಗಳು ಸೇರಿ ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ ಭಗ್ನಾವಶೇಷ ಹಾಕಿರುವುದನ್ನು ಪರಿಶೀಲನೆ ನಡೆಸಿ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಂಡು ಸಂಬಂಧಪಟ್ಟವರಿಗೆ ದಂಡ ವಿಧಿಸಲು ಸೂಚನೆ ನೀಡಿದರು.
ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ:
ಅಂಜನಾ ನಗರ ಕೆಇಬಿ ಉದ್ಯಾನವನದಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಅದನ್ನು ತಪ್ಪಿಸಲು ಕೇಳಿದ್ದಕ್ಕೆ, ಪಾಲಿಕೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಅನೈತಿಕ ಚಟುವಟಿಕೆಗಳನ್ನು ನಡೆಸುವವರ ಮೇಲೆ ಕಾನೂನು ಕ್ರಮ ಕೈಗೊಂಡು ಅದಕ್ಕೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಂಪುರ ಕೆರೆಗೆ ಕೊಳಚೆ ನೀರು ತಡೆಯಿರಿ:
ಸೋಂಪುರ ಕೆರೆಗೆ ಕೊಳಚೆ ನೀರು ಸೇರುತ್ತಿದ್ದು, ಅದನ್ನು ನಿಯಂತ್ರಿಸಲು ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ಜಲಮಂಡಳಿ ಅಧಿಕಾರಿಗಳು ಕೂಡಲೆ ಸ್ಥಳ ಪರಿಶೀಲನೆ ನಡೆಸಿ ಕೆರೆಗೆ ಕೊಳಚೆ ನೀರು ಸೇರುವುದನ್ನು ತಪ್ಪಿಸಬೇಕು. ಎಸ್.ಟಿ.ಪಿ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಂಸ್ಕರಿಸಿದ ನೀರು ಕೆರೆಗೆ ಹೋಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿತ್ತಿಪತ್ರ ಬಿಡುಗಡೆ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮುದಾಯದ ಪ್ರಾಣಿಗಳ ಕುರಿತು ನಾಗರೀಕರಲ್ಲಿ ಜಾಗೃತಿ ಮೂಡಿಸುವ ಕುರಿತಂತೆ ಬಿತ್ತಿಪತ್ರಗಳನ್ನು ವಿತರಿಸಲಾಗುತ್ತಿದ್ದು, ಇಂದು ಆರ್.ಆರ್ ನಗರ ವಲಯದಲ್ಲಿ “ಪ್ರಾಣಿಗಳ ಆರೋಗ್ಯದ ಮೂಲಕ ಸಾರ್ವಜನಿಕ ಆರೋಗ್ಯ” ಕುರಿತ ಜಾಗೃತಿ ಮೂಡಿಸುವ ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಸಾರ್ವಜನಿಕರಿಂದ ಸ್ವೀಕರಿಸಿದ ಪ್ರಮುಖ ಅಹವಾಲುಗಳು:
1. ಉದ್ಯಾನ ಅಭಿವೃದ್ಧಿಯಾಗಿ 8 ವರ್ಷಗಳು ಕಳೆದಿದ್ದು, ಆ ಬಗ್ಗೆ ಕ್ರಮ ಕೈಗೊಳ್ಳಲು ಮನವಿ.
2. ವಾಜರಹಳ್ಳಿಯ ಬಿಸಿಸಿ ಬಡಾವಣೆಯಲ್ಲಿ ಬೀದಿ ಬದಿ ದೀಪಗಳಿಗೆ ಆಟೋ ಸ್ವಿಚ್ ಗಳನ್ನು ಅಳವಡಿಸಲು ಮನವಿ.
3. ಕೋಡಿ ಪಾಳ್ಯ ಮುಖ್ಯರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಮನವಿ.
4. ಬಂಡೆಮಠ ವಾರ್ಡ್ ಬೋರ್ವೆಲ್ ನಿರ್ವಹಣೆ ಸರಿಯಾಗಿ ಮಾಡಲು ಮನವಿ.
5. ದುಬಾಸಿಪಾಳ್ಯ ಮುಖ್ಯ ರಸ್ತೆಯಲ್ಲಿ ಒಳಚರಂಡಿಯಲ್ಲಿ ಹೂಳೆತ್ತಿ, ಅದನ್ನು ತೆರವುಗೊಳಿಸಲು ಮನವಿ.
6. ಕೆಂಗೇರಿ ಕಛೇರಿ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲು ಮನವಿ.
7. ಹೆಮ್ಮಿಗೆಪುರ ವಾರ್ಡ್ ನಲ್ಲಿ ಜಲಮಂಡಳಿ ಕಾಮಗಾರಿ ವೇಳೆ ರಸ್ತೆ ಕತ್ತರಿಸಿದ್ದು, ಅದನ್ನು ಸರಿಪಡಿಸಲು ಮನವಿ.
ಈ ವೇಳೆ ವಲಯ ಆಯುಕ್ತರಾದ ಸತೀಶ್, ಮುಖ್ಯ ಅಭಿಯಂತರರಾದ ಸ್ವಯಂಪ್ರಭ, ಕಾರ್ಯಪಾಲಕ ಅಭಿಯಂತರರು, ಆರೋಗ್ಯಾಧಿಕಾರಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.