ಕೊಲಂಬೊ: ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರ, ಪ್ರವಾಸಿಗರ ನೆಚ್ಚಿನ ತಾಣವಾದ ಮಾಲ್ದೀವ್ಸ್, ಸಾಲದ ಸಂಕಷ್ಟಕ್ಕೆ ತುತ್ತಾಗುವ ಅತಿ ದೊಡ್ಡ ಅಪಾಯವನ್ನು ಎದುರಿಸುತ್ತಿದೆ ಎಂದು ವಿಶ್ವ ಹಣಕಾಸು ಸಂಸ್ಥೆ ಎಚ್ಚರಿಕೆ ನೀಡಿದೆ.
ಚೀನಾದಿಂದ ಹೆಚ್ಚಿನ ಪ್ರಮಾಣದ ಸಾಲ ಪಡೆದಿರುವುದು ಮಾಲ್ದೀವ್ಸ್ ನ ಆರ್ಥಿಕತೆಗೆ ಕುತ್ತಾಗಿ ಪರಿಣಮಿಸಲಿದೆ ಎಂದು ಅರ್ಥಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿರುವ ಬೆನ್ನಲ್ಲೇ ಐಎಂಎಫ್ ಈ ಎಚ್ಚರಿಕೆ ನೀಡಿದೆ.
ಆದರೆ ಮಾಲ್ದೀವ್ಸ್ ನ ವಿದೇಶಿ ಸಾಲದ ಕುರಿತ ವಿವರಗಳನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಬಹಿರಂಗಪಡಿಸಿಲ್ಲ. ಆದರೆ, ಆ ದೇಶದ ಆರ್ಥಿಕ ನೀತಿಯಲ್ಲಿ ತುರ್ತು ಹೊಂದಾಣಿಕೆ ಮಾಡಬೇಕಾದ ಅಗತ್ಯವನ್ನು ಐಎಂಎಫ್ ಪ್ರತಿಪಾದಿಸಿದೆ.
”ಗಣನೀಯವಾದ ನೀತಿ ಬದಲಾವಣೆಗಳಿಲ್ಲದೆ ಮಾಲ್ದೀವ್ಸ್ ನ ಒಟ್ಟಾರೆ ವಿತ್ತೀಯ ಕೊರತೆ ಹಾಗೂ ಸಾರ್ವಜನಿಕ ಸಾಲದ ಪ್ರಮಾಣವು ಅಧಿಕಮಟ್ಚದಲ್ಲಿಯೇ ಉಳಿದುಕೊಂಡಿದೆ ಎಂದು ಐಎಂಎಫ್ ತಿಳಿಸಿದೆ.
2021ರಲ್ಲಿಯೇ ಮಾಲ್ದೀವ್ಸ್ ಚೀನಾಗೆ 3 ಶತಕೋಟಿ ಡಾಲರ್ ಸಾಲವನ್ನು ಬಾಕಿಯಿರಿಸಿಕೊಂಡಿದೆ ಎಂದು ವಿಶ್ವ ಬ್ಯಾಂಕ್ ಮಾಹಿತಿ ನೀಡಿದೆ. ಮುಯಿಝ್ಝು ಅವರ ರಾಜಕೀಯ ಗುರು, 2018ರವರೆಗೆ ಆಡಳಿತ ನಡೆಸಿದ್ದ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅವರು ದೇಶದಲ್ಲಿ ವಿವಿಧ ನಿರ್ಮಾಣ ಯೋಜನೆಗಳಿಗಾಗಿ ಚೀನಾದಿಂದ ಭಾರೀ ಮೊತ್ತದ ಸಾಲವನ್ನು ಪಡೆದುಕೊಂಡಿದ್ದರು.