ಹುಬ್ಬಳ್ಳಿ:- ಅನೈತಿಕ ಸಂಬಂಧದ ಹಿನ್ನೆಲೆ, ಮಹಿಳೆಯನ್ನು ಅಟ್ಟಾಡಿಸಿ ಇಟ್ಟಂಗಿಯಿಂದ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಕಿಮ್ಸ್ ಹಿಂಭಾಗ ಜರುಗಿದೆ.
ಗಂಡನ ಜೊತೆ ಈ ಮಹಿಳೆ ಅನೈತಿಕ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಬೇಸತ್ತ ವ್ಯಕ್ತಿಯ ಹೆಂಡತಿ ಮತ್ತು ಮಕ್ಕಳು ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಮಹಿಳೆ ತನ್ನ ಪತಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ವ್ಯಕ್ತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಮಹಿಳೆ ಸುಮಾರು 10 ವರ್ಷಗಳಿಂದ ಕಿಮ್ಸ್ ನಲ್ಲಿ ಆಯಾ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕೆಲಸ ಮುಗಿಸಿ ಮಹಿಳೆ ಮನೆಗೆ ಹೋಗುತ್ತಿದ್ದಾಗ ವ್ಯಕ್ತಿಯ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಮಹಿಳೆ ಮೇಲೆ ಕುಟುಂಬಸ್ಥರೊಂದಿಗೆ ವ್ಯಕ್ತಿ ಸಹ ಹಲ್ಲೆ ಮಾಡಿದ್ದಾನೆ. ಕಳೆದ ಹತ್ತು ವರ್ಷಗಳಿಂದ ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು ಎಂಬ ಆರೋಪ ಕೇಳಿ ಬಂದಿದೆ.
ಹಲ್ಲೆಗೊಳಗಾದ ತಂಗಿಯನ್ನು ಬಿಡಿಸಲು ಬಂದ ಅಕ್ಕನನ್ನೂ ಥಳಿಸಿದ್ದಾರೆ. ಇಬ್ಬರನ್ನೂ ಸಾರ್ವಜನಿಕ ಸ್ಥಳದಲ್ಲೇ ಹಿಗ್ಗಾಮುಗ್ಗ ಥಳಿಸಿದ್ದಾರೆ. ಚಪ್ಪಲಿ ಹಾಗೂ ಇಟ್ಟಂಗಿಯಿಂದ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.