ಬೆಂಗಳೂರು:- ರಾಜ್ಯ ಸರ್ಕಾರವು ಗಣಿಗಾರಿಕೆ ಅಕ್ರಮಗಳ ತನಿಖೆಯ ಎಸ್ಐಟಿ ಕಾರ್ಯಾವಧಿ ವಿಸ್ತರಿಸಿದೆ. ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ
ಈ ಬಗ್ಗೆ ಮಾತನಾಡಿದ ಸಚಿವ ಹೆಚ್ಕೆ ಪಾಟೀಲ್, ಗಣಿಗಾರಿಕೆ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಇದೀಗ ಅದರ ಅವಧಿ ಮುಕ್ತಾಯವಾಗಿದ್ದು, ಇನ್ನೂ ಒಂದು ವರ್ಷದವರೆಗೆ ಅಧಿಕಾರಾವಧಿಯನ್ನು ವಿಸ್ತರಿಸಲು ಇಂದಿನ ಸಂಪುಟ ಸಭೆ ಅಸ್ತು ಎಂದಿದೆ. 113 ಗಣಿ ಪ್ರಕರಣಗಳು ಬಾಕಿ ಇವೆ. ಎರಡು ಪ್ರಕರಣಗಳು ಹೈಕೋರ್ಟ್ನಲ್ಲಿವೆ. ಎಂಟು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರು ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಮತದಾನ ಮಾಡಲು ಭೋಜನ ವಿರಾಮದ ಅವಧಿ ಸೇರಿ 2 ಗಂಟೆ ಕಾಲ ವಿಶೇಷ ಅನುಮತಿಗೆ ಸಂಪುಟ ಸಭೆ ಒಪ್ಪಿಕೊಂಡಿದೆ. ಅಕ್ಟೋಬರ್ 8ರಿಂದ ಡಿಸೆಂಬರ್ 4ರವರೆಗೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದಿಸಲಾಗಿದೆ.