ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಕೊರೊನಾ ಹಗರಣ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಯಡಿಯೂರಪ್ಪವರ ಅಧಿಕಾರವಾಧಿಯಲ್ಲಿನ ಕೊರೊನಾ ಅಕ್ರಮದ ಕುರಿತು ವಿಚಾರಣೆಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ನಾ ಅವರ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಇದೀಗ ಈ ಆಯೋಗ ಮಧ್ಯಂತರ ವರದಿ ನೀಡಿದೆ. ಈ ವರದಿಯಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ಗೆ ಶಿಫಾರಸು ಮಾಡಿದೆ. ಸರ್ಕಾರ ಸ್ಥಳೀಯ ಕಂಪನಿಗಳಿಂದ ಕೇವಲ 446 ರೂಪಾಯಿ ಪಿಪಿಇ ಕಿಟ್ ಖರೀದಿ ಮಾಡಿತ್ತು. ಆದ್ರೆ ಚೀನಾ ಕಂಪನಿಗಳಿಗೆ ಮಾತ್ರ 2,117 ರೂಪಾಯಿ ಕೊಟ್ಟಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು.
ಮಾಜಿ ಸಿಎಂ ಬಿಎಸ್ ವೈಗೆ ಮತ್ತೊಂದು ಸಂಕಷ್ಟ: 300 ಕೋಟಿ ಅಕ್ರಮದ ತನಿಖೆಗೆ ಸಮಿತಿ ರಚನೆ
ಮಧ್ಯಂತರ ವರದಿಯಲ್ಲೇನಿದೆ..?
ಯಡಿಯೂರಪ್ಪ ಮತ್ತು ರಾಮುಲು ಕಾರ್ಯವೈಖರಿ ಬಗ್ಗೆ ಸಮಿತಿ ಆಕ್ಷೇಪವ್ಯಕ್ತಪಡಿಸಿದೆ. ಒಟ್ಟು ಖಾಸಗಿ ಲ್ಯಾಬ್ಗಳಿಗೆ 6.93ಕೋಟಿ ಹಣ ಸಂದಾಯವಾಗಿದೆ. 14 ಲ್ಯಾಬ್ಗಳು ICMRನಿಂದ ಮಾನ್ಯತೆ ಪಡೆದಿಲ್ಲ. ಹೀಗಾಗಿ ಈ ಲ್ಯಾಬ್ ಗಳು ಅಧಿಕೃತವಲ್ಲ ಎಂದು ಉಲ್ಲೇಖಿಸಲಾಗಿದೆ. RTPCR ಟೆಸ್ಟ್ಗೆ ಲ್ಯಾಬ್ಗಳ ಸಾಮರ್ಥ್ಯ, ಕ್ಷಮತೆ ಗುರುತಿಸಿಲ್ಲ. 6 ಖಾಸಗಿ ಲ್ಯಾಬ್ ಗಳಿಗೆ ಒಪ್ಪಂದವಿಲ್ಲದೆ ಹಣ ಸಂದಾಯ ಮಾಡಲಾಗಿದೆ. ಅನಧಿಕೃತವಾಗಿ ಲ್ಯಾಬ್ಗಳಿಗೆ ಹಣ ಸಂದಾಯದ ಬಗ್ಗೆ ಮಧ್ಯಂತರ ವರದಿಯಲ್ಲಿ ತಿಳಿಸಲಾಗಿದೆ. 8 ಲ್ಯಾಬ್ಗಳಿಗೆ ಅನುಮತಿ ಪಡೆಯದೆ 4.28 ಕೋಟಿ ಹಣ ನೀಡಲಾಗಿದೆ ಎಂದು ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಎಂಡಿ ಪಾರದರ್ಶಕತೆ ಅನುಸರಿಸದೆ ಆಯ್ದ ಲ್ಯಾಬ್ಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೇ ಕೋವಿಡ್ ಜಾಹೀರಾತಿನಲ್ಲೂ ಅಕ್ರಮ ಎಸಗಿದ್ದಾರೆ ಎನ್ನಲಾಗಿದೆ. BMTC ಎಂಡಿ ಸಲಹೆ ಮೇರೆಗೆ ಯಾವುದೇ ಅನುಮತಿ ಪಡೆಯದೆ ಖಾಸಗಿ ಸಂಸ್ಥೆಗೆ 8.85ಲಕ್ಷ ಹಣ ಸಂದಾಯ ಮಾಡಲಾಗಿದೆ. 8 ಲಕ್ಷ ಹಣ ವಸೂಲಿ ಮಾಡುವಂತೆ ಸರ್ಕಾರಕ್ಕೆ ಸಮಿತಿ ಶಿಫಾರಸು ಮಾಡಲಾಗಿದೆ.