ಪ್ರತಿಯೊಬ್ಬ ವ್ಯಕ್ತಿಯೂ ದಿನಕ್ಕೆ ಮೂರು ಬಾರಿ ಆಹಾರ ಸೇವನೆ ಮಾಡ್ಬೇಕು. ಯಾವುದೇ ವೈದ್ಯರು ರಾತ್ರಿ ಊಟ ಬಿಡುವಂತೆ ಸಲಹೆ ನೀಡುವುದಿಲ್ಲ. ಖಾಲಿ ಹೊಟ್ಟೆಯಲ್ಲಿ ಮಲಗುವುದು ನಿಮ್ಮ ದೇಹದಲ್ಲಿ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ, ನಿಮ್ಮ ಚಯಾಪಚಯವು ನಿಧಾನಗೊಳ್ಳುತ್ತದೆ. ಇದಲ್ಲದೆ ಪ್ರೋಟೀನ್ ಪರಿವರ್ತನ ಸಾಮರ್ಥ್ಯ ಅರ್ಧದಷ್ಟು ಕಡಿಮೆಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ಏನೆಲ್ಲ ಸಮಸ್ಯೆಯುಂಟಾಗುತ್ತದೆ ಎಂಬ ಸಂಗತಿಯನ್ನು ನಾವಿಂದು ಹೇಳ್ತೇವೆ.
ಖಾಲಿ ಹೊಟ್ಟೆಯಲ್ಲಿ ಮಲಗಿದ್ರೆ ಕಾಡುತ್ತೆ ಈ ಸಮಸ್ಯೆ :
ನಿದ್ರಾಭಂಗ : ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ಮಧ್ಯರಾತ್ರಿ (Midnight) ಯಲ್ಲಿ ಹಸಿವು ಕಾಡುತ್ತದೆ. ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗಿದಾಗ ನಿಮ್ಮ ಮೆದುಳು (Brain) ಆಹಾರದ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತದೆ. ಮಧ್ಯರಾತ್ರಿ ಹಸಿವಿನ ಭಾವನೆ ಹೆಚ್ಚಾಗುತ್ತದೆ ಮತ್ತು ನಿದ್ರೆ (Sleep)ಯ ಮಧ್ಯದಲ್ಲಿ ಎಚ್ಚರವಾಗುತ್ತದೆ. ನಿದ್ರಾಹೀನತೆ ಮತ್ತಷ್ಟು ಸಮಸ್ಯೆಗೆ ಕಾರಣವಾಗುತ್ತದೆ.
ಸ್ನಾಯು ಗಳಿಗೆ ಹಾನಿ : ಆಹಾರಕ್ರಮವು ನಮ್ಮ ಸ್ನಾಯುಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ಸ್ನಾಯುಗಳಿಗೆ ಹಾನಿಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಮಲಗುವುದು ದೇಹದಲ್ಲಿನ ಪ್ರೋಟೀನ್ (protein) ಮತ್ತು ಅಮೈನೋ ಆಮ್ಲಗಳ ಕಾರ್ಯವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ.
ಹದಗೆಡುವ ಮನಸ್ಥಿತಿ : ಖಾಲಿ ಹೊಟ್ಟೆಯಲ್ಲಿ ಮಲಗುವ ಜನರ ಮೂಡ್ ಸರಿಯಾಗಿರೋದಿಲ್ಲ. ಖಾಲಿ ಹೊಟ್ಟೆಯಲ್ಲಿ ಮಲಗುವುದು ವ್ಯಕ್ತಿಯ ಸ್ವಭಾವದಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ. ಅದು ನಿಮ್ಮ ಎಲ್ಲಾ ವಿಷಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ : ರಾತ್ರಿ ಆಹಾರ ಸೇವಿಸದೆ ಮಲಗಿದ್ರೆ ಅದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಪ್ರಾರಂಭಿಸುತ್ತದೆ. ಇದು ನಂತರ ಅಧಿಕ ರಕ್ತದೊತ್ತಡ, ಮಧುಮೇಹ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ನಾಳೀಯ ಕಾಯಿಲೆಗೆ ಕಾರಣವಾಗುತ್ತದೆ.
ಥೈರಾಯ್ಡ್ ಹೆಚ್ಚಳ : ರಾತ್ರಿ ಊಟ ಬಿಟ್ರೆ ದೇಹದಲ್ಲಿ ಥೈರಾಯ್ಡ್ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಅನೇಕ ಸಮಸ್ಯೆಗಳು ಉಂಟಾಗಬಹುದು.
ತೂಕ ಹೆಚ್ಚಳ : ರಾತ್ರಿ ಆಹಾರ ಸೇವಿಸದೆ ಇದ್ದರೆ ತೂಕ ಕಡಿಮೆ ಆಗುತ್ತದೆ ಎಂದು ಕೆಲವರು ನಂಬಿದ್ದಾರೆ. ಆದ್ರೆ ಅವರ ನಂಬಿಕೆ ತಪ್ಪು. ತಜ್ಞರ ಪ್ರಕಾರ ರಾತ್ರಿ ಊಟ ಬಿಟ್ಟರೆ ತೂಕ ಕಡಿಮೆಯಾಗೋದಿಲ್ಲ, ಇದರ ಬದಲು ತೂಕ ಹೆಚ್ಚಾಗುತ್ತದೆ. ಅನೇಕ ರೋಗಗಳಿಗೆ ಇದು ದಾರಿಮಾಡಿ ಕೊಡುತ್ತದೆ.
ಮಲಗುವ ಮುನ್ನ ಏನು ತಿನ್ನಬೇಕು ? : ಮಲಗುವ ಮೊದಲು ಆಹಾರ ಯಾವುದು ಸೇವನೆ ಮಾಡ್ಬೇಕು ಎಂಬುದು ಗೊತ್ತಿರಬೇಕು. ಅಮೈನೋ ಆಮ್ಲ ಟ್ರಿಪ್ಟೊಫಾನ್ ಹೊಂದಿರುವ ಆಹಾರವನ್ನು ರಾತ್ರಿ ಸೇವನೆ ಮಾಡುವುದು ಒಳ್ಳೆಯದು. ಈ ಆಹಾರಗಳು ದೇಹದಲ್ಲಿ ಸಿರೊಟೋನಿನ್ ಹಾರ್ಮೋನ್ ಅನ್ನು ಸಕ್ರಿಯಗೊಳಿಸುವ ಮೂಲಕ ನಿದ್ರೆ ಬರಲು ಸಹಾಯ ಮಾಡುತ್ತದೆ.
ರಾತ್ರಿ ಮಲಗುವ ಮುನ್ನ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವ ಆಹಾರ ಸೇವನೆ ಮಾಡಬಾರದು. ಹುರಿದ, ಸಿಹಿ, ಮಸಾಲೆಯುಕ್ತ ಆಹಾರವನ್ನು ಸೇವಿಸಬಾರದು. ಕೆಫೀನ್ ಹಾಗೂ ಮದ್ಯಪಾನ ಸೇವನೆಯಿಂದ ದೂರವಿರಬೇಕು.