ಚಾಂಪಿಯನ್ಸ್ ಟ್ರೋಫಿ ಆಡಲು ನಿರಾಕರಿಸಿದರೆ ಭಾರತದ ವಿರುದ್ಧ ನಾವು ಆಡಲ್ಲ ಎಂದು ಪಾಕಿಸ್ತಾನ್ ಗೊಡ್ಡು ಬೆದರಿಕೆ ಹಾಕುತ್ತಿದೆ.
ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಬೇಕಾದ ಅನಿವಾರ್ಯತೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಎದುರಾಗಿದೆ. ಆದರೆ ಪಿಸಿಬಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಸಿದ್ಧವಿಲ್ಲ. ಹೀಗಾಗಿಯೇ ಇದೀಗ ಚಾಂಪಿಯನ್ಸ್ ಟ್ರೋಫಿ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. ಏಕೆಂದರೆ ಈ ಟೂರ್ನಿಯಿಂದ ಭಾರತ ತಂಡ ಹೊರಗುಳಿದರೆ, ಪಾಕ್ ಕ್ರಿಕೆಟ್ ಮಂಡಳಿ ಹಾಗೂ ಐಸಿಸಿಗೆ ತುಂಬಲಾರದ ನಷ್ಟ ಉಂಟಾಗಲಿದೆ. ಹೀಗಾಗಿಯೇ ಪಿಸಿಬಿ ಇದೀಗ ಗೊಡ್ಡು ಬೆದರಿಕೆಗಳತ್ತ ಮುಖ ಮಾಡಿದೆ.
ಅದರ ಮೊದಲ ಭಾಗವಾಗಿ ಇದೀಗ ಭಾರತ ತಂಡವು ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ನಿರಾಕರಿಸಿದರೆ, ಇನ್ಮುಂದೆ ನಾವು ಸಹ ಭಾರತದ ವಿರುದ್ಧ ಆಡಲ್ಲ ಎಂದು ಪಾಕ್ ಬೆದರಿಕೆಯೊಡ್ಡಿದೆ.
ಅಂದರೆ ಉಭಯ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿದೆ. ಒಂದು ವೇಳೆ ಟೀಮ್ ಇಂಡಿಯಾ ಪಾಕ್ಗೆ ತೆರಳಲು ಹಿಂದೇಟು ಹಾಕಿದರೆ, ಮುಂಬರುವ ಐಸಿಸಿ ಟೂರ್ನಿಗಳಲ್ಲಿ ಭಾರತದ ವಿರುದ್ಧ ಯಾವುದೇ ಪಂದ್ಯವಾಡದಿರಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ ಎಂದು ವರದಿಯಾಗಿದೆ
ಇಲ್ಲಿ ಪಾಕಿಸ್ತಾನ್ ತಂಡವು ಭಾರತದ ವಿರುದ್ಧದ ಪ್ರಮುಖ ಟೂರ್ನಿಗಳಲ್ಲಿ ಕಣಕ್ಕಿಳಿಯದಿದ್ದರೆ, ಅದರಿಂದ ಬಿಸಿಸಿಐಗೆ ಹೆಚ್ಚಿನ ನಷ್ಟ ಉಂಟಾಗಲಿದೆ. ಏಕೆಂದರೆ ಪಾಕ್ ವಿರುದ್ಧದ ಪಂದ್ಯದಿಂದ ಬಿಸಿಸಿಐ ಭಾರೀ ಪ್ರಮಾಣದ ಆದಾಯಗಳಿಸುತ್ತಿದೆ.
ಇದೀಗ ಇದನ್ನೇ ಬಂಡವಾಳವಾಗಿಸಿ ಬಿಸಿಸಿಐ ಅನ್ನು ಬೆದರಿಸುವ ತಂತ್ರಕ್ಕೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮುಂದಾಗಿದೆ. ಆದರೆ ಪಿಸಿಬಿಯ ಈ ಗೊಡ್ಡು ಬೆದರಿಕೆಗಳಿಗೆ ಬಿಸಿಸಿಐ ತಲೆ ಕೆಡಿಸಿಕೊಳ್ಳುವುದಿಲ್ಲ.
ಏಕೆಂದರೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದಿಂದ ಬಿಸಿಸಿಐ ಉತ್ತಮ ಆದಾಯ ಗಳಿಸುತ್ತಿದ್ದರೂ, ಅತ್ತ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಪಾಲಿಗೆ ಟೀಮ್ ಇಂಡಿಯಾ ವಿರುದ್ಧದ ಪಂದ್ಯಗಳೇ ಜೀವಾಳ ಎನ್ನಲಾಗಿದೆ