ಹಿಂದೂ ಹೊಸ ವರ್ಷ ಎಂದು ಕರೆಯಲ್ಪಡುವ ಯುಗಾದಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಯುಗಾದಿಯನ್ನು ಇದೇ ಏಪ್ರಿಲ್ 9 ರಂದು ಆಚರಿಸಲಾಗುವುದು. ಈ ಹಬ್ಬಕ್ಕೆ ಸಂಬಂಧಿಸಿದ ಅನೇಕ ನಂಬಿಕೆಗಳು ಮತ್ತು ಸಂಪ್ರದಾಯಗಳಿವೆ. ಈ ಕೆಲವು ಸಂಪ್ರದಾಯಗಳ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ. ಈ ದಿನ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಂಡರೆ, ಮನೆಯಲ್ಲಿ ವರ್ಷವಿಡೀ ಸಂತೋಷ, ಸಮೃದ್ಧಿ ಮತ್ತು ಸಕಲೈಶ್ವರ್ಯ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.
ಯುಗಾದಿ ಹಬ್ಬದೊಂದಿಗೆ ಆರಂಭವಾಗುವ ಈ ಹಿಂದೂ ಹೊಸ ವರ್ಷದಂದು ಮನೆಗೆ ಈ ವಸ್ತುಗಳನ್ನು ಅತ್ಯಂತ ಶುಭ ಮತ್ತು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮತ್ತು ಇವುಗಳು ಹೊಸ ವರ್ಷದಲ್ಲಿ ನಿಮ್ಮ ಅದೃಷ್ಟವನ್ನು ಬೆಳಗಿಸುತ್ತದೆ ಎನ್ನುವ ನಂಬಿಕೆಯಿದೆ. ಹಿಂದೂ ಹೊಸ ವರ್ಷದಂದು ಅಥವಾ ಯುಗಾದಿಯಂದು ಈ ವಸ್ತುಗಳನ್ನು ತಪ್ಪದೇ ಮನೆಗೆ ತನ್ನಿ..
ಚಿಕ್ಕ ತೆಂಗಿನಕಾಯಿ
ಹಿಂದೂ ಹೊಸ ವರ್ಷದ ದಿನದಂದು ಅಥವಾ ಯುಗಾದಿ ಹಬ್ಬದ ದಿನದಂದು ನೀವು ಮನೆಗೆ ಚಿಕ್ಕದೊಂದು ತೆಂಗಿನಕಾಯಿಯನ್ನು ತಂದು ಆ ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಅದನ್ನು ತಿಜೋರಿಯಲ್ಲಿ ಅಥವಾ ಕಮಾನಿನಲ್ಲಿಡಿ. ಇದರಿಂದ ನಿಮ್ಮ ಮನೆಯಲ್ಲಿ ಸುಖ-ಶಾಂತಿ ನೆಲೆಸುವುದರ ಜೊತೆಗೆ ಹಣವೂ ನೀರಿನಂತೆ ಹರಿದು ಬರಲಿದೆ.
ತುಳಸಿ ಗಿಡ
ತುಳಸಿಯು ಹಿಂದೂ ಧರ್ಮದಲ್ಲಿ ಆರಾಧನಾ ದೇವತೆಯಾಗಿದ್ದಾಳೆ. ಇದನ್ನು ವಿಷ್ಣುವಿನ ರೂಪವೆಂದೂ ಪೂಜಿಸಲಾಗುತ್ತದೆ. ಹಿಂದೂ ಹೊಸ ವರ್ಷದ ಸಂದರ್ಭದಲ್ಲಿ ತುಳಸಿ ಗಿಡವನ್ನು ಮನೆಗೆ ತನ್ನಿ. ಇದನ್ನು ಮನೆಯಲ್ಲಿ ಇಡುವುದರಿಂದ ನಿಮ್ಮ ಮನೆಯ ಸಕಾರಾತ್ಮಕತೆಯು ಹಾಗೇ ಉಳಿಯುತ್ತದೆ.
ಲೋಹದ ಆಮೆ
ಲೋಹದ ಆಮೆಯನ್ನು ಮನೆಗೆ ತರುವುದರಿಂದ ಧನಾತ್ಮಕ ಶಕ್ತಿ ಹರಡುತ್ತದೆ ಮತ್ತು ನಿಮ್ಮ ಮನೆಯಲ್ಲಿನ ದುಷ್ಟ ಶಕ್ತಿಗಳು ಶೀಘ್ರದಲ್ಲೇ ನಾಶವಾಗುತ್ತದೆ ಎನ್ನುವ ನಂಬಿಕೆಯಿದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿಯೂ ನೆಲೆಸುತ್ತದೆ.
ಶಂಖ
ಶಂಖವನ್ನು ಅದರಲ್ಲೂ ದಕ್ಷಿಣಾವರ್ತಿ ಶಂಖವನ್ನು ಮನೆಯಲ್ಲಿಟ್ಟರೆ ಹಣದ ಹರಿವು ಹೆಚ್ಚಾಗುತ್ತದೆ. ಮನೆಯಲ್ಲಿ ತಂದು ಪೂಜೆ ಮಾಡಿದ ನಂತರ ಹಣ ಇಟ್ಟಿರುವ ಜಾಗದಲ್ಲಿ ಇಡಿ. ಇದು ಪ್ರಗತಿಯ ಎಲ್ಲಾ ಮಾರ್ಗಗಳನ್ನು ತೆರೆಯುತ್ತದೆ ಮತ್ತು ಎಂದಿಗೂ ಹಣದ ಕೊರತೆಯಾಗದಂತೆ ನಿಮ್ಮನ್ನು ಕಾಪಾಡುತ್ತದೆ.
ನವಿಲು ಗರಿಗಳು
ಶ್ರೀಕೃಷ್ಣನಿಗೆ ನವಿಲು ಗರಿಗಳು ತುಂಬಾನೇ ಪ್ರಿಯವಾದುವು ಎಂದು ಹೇಳಲಾಗುತ್ತದೆ. ಯಾವ ಮನೆಯಲ್ಲಿ ನವಿಲುಗರಿಗಳಿರುತ್ತವೆಯೋ ಆ ಮನೆಯಲ್ಲಿ ಸದಾಕಾಲ ಲಕ್ಷ್ಮಿ ದೇವಿಯು ನೆಲೆಸುತ್ತಾಳೆ. ಹಿಂದೂ ಹೊಸ ವರ್ಷದ ಮೊದಲು ಮನೆಯಲ್ಲಿ ನವಿಲು ಗರಿಗಳನ್ನು ತನ್ನಿ. ಸುಮಾರು 3 ನವಿಲು ಗರಿಗಳನ್ನು ತನ್ನಿ.
ಲಾಫಿಂಗ್ ಬುದ್ಧ
ಹಿಂದೂ ಹೊಸ ವರ್ಷದ ದಿನದ ನೀವು ಮನೆಗೆ ಲಾಫಿಂಗ್ ಬುದ್ಧನ ವಿಗ್ರಹವನ್ನು ಅಥವಾ ಫೋಟೋವನ್ನು ತರಬಹುದು. ಇದನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಇದರಿಂದ ಮನೆಯಲ್ಲಿ ಎಂದಿಗೂ ಹಣದ ಕೊರತೆಯೆನ್ನುವಂತಹದ್ದು ಆಗುವುದಿಲ್ಲ.