ಬೇಸಿಗೆ ಬಂತೆಂದರೆ ಚೇಳುಗಳು ಬಿಸಿಲ ಧಗೆಗೆ ಹೊರ ಬರುವ ಸಾಧ್ಯತೆ ಅಧಿಕ. ಆಗ ಅವುಗಳು ಕಚ್ಚುವ ಸಾಧ್ಯತೆಯೂ ಉಂಟು.
ಪ್ರಪಂಚದಲ್ಲಿ ಸುಮಾರು 1500 ವಿಧದ ಚೇಳುಗಳಿದ್ದು, ಇವುಗಳಲ್ಲಿ ಕೇವಲ 25 ವಿಧಗಳು ಮಾತ್ರ ವಿಷಕಾರಿ. ಮನುಷ್ಯ ಮತ್ತು ಪ್ರಾಣಿಗಳಲ್ಲಿ ಸಾವನ್ನಂಟು ಮಾಡುವುದು ಮಾತ್ರ 17 ಪ್ರಬೇಧಗಳು. ಅಂಟಾರ್ಕ್ಟಿಕಾ ಖಂಡವನ್ನು ಹೊರತು ಪಡಿಸಿ ಪ್ರಪಂಚದ ಎಲ್ಲಾ ದೇಶಗಳಲ್ಲಿ ಚೇಳುಗಳಿವೆ.
ಚೇಳಿನ ವಿಷವು ವಿಶ್ವದ ಅತ್ಯಂತ ದುಬಾರಿ ವಿಷಗಳಲ್ಲಿ ಒಂದಾಗಿದೆ. ಕೆಲವೊಂದು ಔಷಧಗಳನ್ನು ಚೇಳಿನ ವಿಷದಿಂದ ತಯಾರಿಸಲಾಗುತ್ತದೆ. ಹಾಗಾಗಿಯೇ ಚೇಳಿನ ವಿಷಕ್ಕೆ ಹೆಚ್ಚಿನ ಬೇಡಿಕೆಯಿದೆ. ಸದ್ಯ ಒಂದು ಗ್ರಾಂ ಚೇಳಿನ ವಿಷ 80 ಸಾವಿರದವರೆಗೆ ಮಾರಾಟವಾಗುತ್ತಿದೆ. ಇದು ವಿಶ್ವದ ಅತ್ಯಂತ ದುಬಾರಿ ವಿಷ ಎಂಬ ಮನ್ನಣೆಯನ್ನು ಗಳಿಸಿದೆ. ಇದರಿಂದಾಗಿ ಟರ್ಕಿಯ ಲ್ಯಾಬ್ಗಳಲ್ಲಿ ಚೇಳುಗಳನ್ನು ಸಾಕಲಾಗುತ್ತಿದೆ.ಟರ್ಕಿಯ ಪ್ರಯೋಗಾಲಯವು ದಿನಕ್ಕೆ 2 ಗ್ರಾಂ ವಿಷವನ್ನು ಚೇಳುಗಳಿಂದ ಸಂಗ್ರಹಿಸುತ್ತದೆ. ಚೇಳುಗಳನ್ನು ಪೆಟ್ಟಿಗೆಗಳಿಂದ ಹೊರತೆಗೆಯಲಾಗುತ್ತದೆ ಮತ್ತು ವಿಷವನ್ನು ವಿಶೇಷ ವಿಧಾನಗಳಲ್ಲಿ ಸಂಗ್ರಹಿಸಲಾಗುತ್ತದೆ.
ಚೇಳುಗಳಲ್ಲಿ ಮುಖ್ಯವಾದವು ಕಪ್ಪುಬಣ್ಣದ ಚೇಳುಗಳು, ಕಂದು ಬಣ್ಣದ ಚೇಳುಗಳು, ಕೆಂಪು ಕಾಲಿನ ಚೇಳುಗಳು, ಹಾರುವ ಮತ್ತು ಓಡುವ ಚೇಳುಗಳು, ಇತ್ಯಾದಿ. ಒಟ್ಟಾರೆ ಪ್ರಾಣಿಗಳಲ್ಲಿ ಈ ಕಪ್ಪು ಬಣ್ಣದ ಚೇಳುಗಳು ಮುಖ್ಯವಾಗಿ ನಾಯಿ ಮತ್ತು ಬೆಕ್ಕುಗಳನ್ನು ಹೆಚ್ಚಾಗಿ ಬಾಧಿಸುತಿದ್ದು ಇದರ ವೈಜ್ಞಾನಿಕ ಹೆಸರು ಲಾಟ್ರೋಡಕ್ಟಸ್ ಮ್ಯಾಕ್ಟನ್ಸ್ ಆಗಿದೆ. ಈ ಚೇಳು ಹೆಚ್ಚು ಅಪಾಯಕಾರಿ ವಿಷವಾದ ಆಲ್ಫಾ ಲಾಟರೋಟಾಕ್ಸಿನ್ ಎಂಬ ವಿಷಕಾರಿ ಅಂಶವನ್ನು ಸ್ರವಿಸುತ್ತವೆ.
ಚೇಳಿನ ವಿಷದಲ್ಲಿ ನರವಿಷ, ಹೃದಯವಿಷ, ಮೂತ್ರಜನಕಾಂಗವಿಷ, ರಕ್ತವಿಷ, ಹಿಸ್ಟಮಿನ್, ಫಾಸ್ಫೋಲೈಪೇಸ್ ಇತ್ಯಾದಿ ವಿಷಗಳ ಸಮೂಹವೇ ಇದೆ.ಈ ವಿಷಕಾರಿ ಅಂಶವು ಪ್ರಾಣಿ ಮತ್ತು ಮನುಷ್ಯನ ನರಮಂಡಲದ ಮೇಲೆ ಅತಿಯಾದ ಹಾನಿಯನ್ನುಂಟುಮಾಡುವುದಲ್ಲದೆ ಜೀವಕೋಶಗಳ ವಿವಿಧ ಜೈವಿಕ ಕ್ರಿಯೆಗೆ ಅತ್ಯವಶ್ಯಕವಾದ ಕ್ಯಾಲ್ಸಿಯಂ ಕಣಗಳ ಜೊತೆ ಅಂಟಿಕೊಂಡು ಜೀವಕೋಶದ ಒಳಭಾಗದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದಾಗಿ ಜೀವಕೋಶದ ಸಾಮಾನ್ಯ ಜೈವಿಕ ಕ್ರಿಯೆಗೆ ದಕ್ಕೆಯನ್ನುಂಟುಮಾಡುತ್ತದೆ. ಈ ವಿಷಕಾರಿ ಆಂಶವು ಲ್ಯೂಸಿನ್, ಟೈರೋಸಿನ್ ಮತ್ತು ಹಯಲುರಿನಿಡೇಸ್ ಎಂಬ ಅಂಶಗಳ ಮಿಶ್ರಣವಾಗಿದ್ದು ಸಾಮಾನ್ಯ ಹಾವಿನ ವಿಷಕ್ಕಿಂತ 10 ರಿಂದ 15 ಕ್ಕಿಂತ ಹೆಚ್ಚುಪಟ್ಟು ತೀಕ್ಷ್ಣವಾದ ವಿಷವಾಗಿದೆ.
ಚೇಳುಗಳು ಕಡಿದ ಜಾಗವನ್ನು ಸ್ವಚ್ಚಗೊಳಿಸಿ ಹಾಕಿ ಅದಕ್ಕೆ ಸ್ಪಿರಿಟ್ ಅಥವಾ ಅಯೋಡಿನ್ ದ್ರಾವಣ ಹಾಕಬೇಕು. ಅತ್ಯಂತ ನೋವು ಇರುವುದರಿಂದ ನೋವು ನಿವಾರಕದ ತುಂತುರು ಹಾಕಬಹುದು. ಕಡಿದ ಸ್ಥಳಕ್ಕೆ ಮಂಜುಗಡ್ಡೆ ಹಾಕಿದಲ್ಲಿ ಒಂದಿಷ್ಟು ನೋವು ಕಡಿಮೆಯಾಗುತ್ತದೆ. ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಬೇಕು.
ಚಿಕಿತ್ಸಾ ಕ್ರಮಗಳು ಯಾವುದು?
• ಅಮೇರಿಕಾದಂತ ದೇಶಗಳಲ್ಲಿ ಚೇಳುಗಳ ಕಡಿತ ವಿಷಬಾಧೆ ಜಾಸ್ತಿ ಇರುವ ಸ್ಥಳಗಳಲ್ಲಿ ಪ್ರತ್ಯೌಷಧ ಇದೆ. ಆದರೆ ಪಶುಗಳಲ್ಲಿ ಈ ವಿಷಬಾಧೆಗೆ ಯಾವುದೇ ಪ್ರತಿವಿಷವಿರುವುದಿಲ್ಲ.
• ರೋಗ ಲಕ್ಷಣಗಳಿಗನುಸಾರವಾಗಿ ಚಿಕಿತ್ಸೆ ಒದಗಿಸುವುದು. ಮನುಷ್ಯರಲ್ಲಿ ನೋವನ್ನು ಮತ್ತು ಜ್ವರವನ್ನು ಕಡಿಮೆ ಮಾಡಲು ಪ್ಯಾರಾಸೆಟಮಾಲ್ ಗುಳಿಗೆ, ಉದ್ರೇಕಶಮನ ಔಷಧಿ,ಪ್ರಾಝೋಸಿನ್ ಔಷಧಿ ಇತ್ಯಾದಿ ನೀಡುತ್ತಾರೆ.
• ಮಾಂಸಖಂಡಗಳಲ್ಲಿ ಬಿಗಿತ ಹೆಚ್ಚಾಗಿರುವುದನ್ನು ಮತ್ತು ಪ್ರಾಣಿಗಳು ಅತಿರೇಕಗೊಂಡಿರುವುದನ್ನು ನಿಯಂತ್ರಣಗೊಳಿಸಲು ಕ್ಯಾಲ್ಸಿಯಂ ಗ್ಲೂಕೋನೇಟ್, ಸೋಡಿಯಂ ಬೈ ಕಾರ್ಬೊನೇಟ್ ಔಷಧಗಳನ್ನು ಅಳವಡಿಸುವುದು.
• ಅಗತ್ಯವಾದ ಲವಣಾಂಶಗಳ ಬಳಕೆ ಮತ್ತು ಉಸಿರಾಟಕ್ಕೆ ಅನುಕೂಲವಾಗುವ ಔಷಧಗಳನ್ನು ಅಳವಡಿಸುವುದು.
• ಕಾರ್ಟಿಕೊಸ್ಟೀರಾಯ್ಡ್ ಮತ್ತು ಅಟ್ರೋಪಿನ್ ಎಂಬ ಔಷಧಗಳಿಂದಲೂ ಸಹ ಉಪಚರಿಸಬಹುದಾಗಿದೆ.
• ಚೇಳಿನ ವಿಷಬಾಧೆಗೆ ಒಳಪಟ್ಟ ಪ್ರಾಣಿಗಳನ್ನು ಹತ್ತಿರದ ಪಶುವೈದ್ಯರ ಸಂಪರ್ಕದ ಮೇರೆಗೆ ಚಿಕಿತ್ಸೆ ಒದಗಿಸುವುದು ಒಳಿತು.