ಜೀವನದ ಇಳಿ ವಯಸ್ಸನ್ನು ನೆಮ್ಮದಿಯಿಂದ ಕಳೆಯಬೇಕು ಎನ್ನುವುದು ಬಹುತೇಕರ ಕನಸು. ದುಡಿಯಲು ಸಾಧ್ಯವಿಲ್ಲದಿದ್ದರೂ ಇತರರ ಮುಂದೆ ಕೈ ಚಾಚದೆ ಆರ್ಥಿಕವಾಗಿ ಸ್ವಾವಲಂಬಿಯಾಗಿರಬೇಕು ಎನ್ನುವುದನ್ನು ಪ್ರತಿಯೊಬ್ಬರೂ ಆಗ್ರಹಿಸುತ್ತಾರೆ. ಅಂತಹ ಅಸಂಘಟಿತ ವಲಯದ ಕಾರ್ಮಿಕರು, ದಿನಗೂಲಿ ಮಾಡುವವರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಯೇ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್. ಇದಕ್ಕೆ ಹೆಸರು ನೋಂದಾಯಿಸುವುದು ಹೇಗೆ ಮತ್ತು ಎಲ್ಲಿ? ಯಾರೆಲ್ಲ ಅರ್ಹರು ? ಮುಂತಾದ ಸಂಪೂರ್ಣ ವಿವರ ಇಲ್ಲಿದೆ.
ಏನಿದು ಯೋಜನೆ?
ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿ ಹೊಂದಿದೆ. ನಿರ್ದಿಷ್ಟ ವಯಸ್ಸು ತಲುಪಿದ ನಂತರ (60 ವರ್ಷ) ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ ಸರಕಾರ ಪಿಂಚಣಿ ನೀಡುತ್ತದೆ. ಇದಕ್ಕಾಗಿ ಅವರು ಮಾಡಬೇಕಾದುದು ಇಷ್ಟೇ. ಪ್ರತಿ ತಿಂಗಳು ಒಂದಷ್ಟು ಮೊತ್ತ ಹೂಡಿಕೆ ಮಾಡಬೇಕು. ಸರ್ಕಾರವೂ ಅಷ್ಟೇ ಮೊತ್ತವನ್ನು ಭರಿಸುತ್ತದೆ. 60 ವರ್ಷ ಆದ ಬಳಿಕ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಫಲಾನುಭವಿಗೆ 3,000 ರೂ. ಲಭಿಸುತ್ತದೆ. ಫಲಾನುಭವಿಯ ವಯಸ್ಸನ್ನು ಆಧರಿಸಿದ ಪ್ರತಿ ತಿಂಗಳ ಹೂಡಿಕೆಯ ಮೊತ್ತವನ್ನು ನಿರ್ಧರಿಸಲಾಗುತ್ತದೆ.
ಯಾರು ಅರ್ಹರು?
ಬೀದಿಬದಿ ವ್ಯಾಪಾರಿಗಳು, ಚಾಲಕರು, ಟೈಲರ್, ಕಟ್ಟಡ ನಿರ್ಮಾಣ ಕಾರ್ಮಿಕರು, ಮಧ್ಯಾಹ್ನದ ಬಿಸಿಯೂಟ ಯೋಜನೆ ಕಾರ್ಮಿಕರು, ರಿಕ್ಷಾ ಚಾಲಕರು, ಬೀಡಿ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರು ಪಿಎಂ ಶ್ರಮ ಯೋಗಿ ಮನ್ ಧನ್ ಯೋಜನೆಯ ಪ್ರಯೋಜನ ಪಡೆಯಬಹುದು. ಈ ಯೋಜನೆಯಡಿಯಲ್ಲಿ ಸರ್ಕಾರ ಇವರಿಗೆ ಪಿಂಚಣಿ ನೀಡುತ್ತದೆ. ಸರ್ಕಾರದ ಇತರ ಯಾವುದೇ ಯೋಜನೆ ಫಲಾನುಭವಿಯಲ್ಲದ ಯಾವುದೇ ಅಸಂಘಟಿತ ವಲಯದ 18 ವರ್ಷದಿಂದ 40 ವರ್ಷದೊಳಗಿನ ಕಾರ್ಮಿಕರು ಈ ಯೋಜನೆ ಪ್ರಯೋಜನ ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸುವ ವ್ಯಕ್ತಿ ಮಾಸಿಕ 15,000ರೂ.ಗಿಂತ ಕಡಿಮೆ ವೇತನ ಹೊಂದಿರಬೇಕು.
ಯಾವೆಲ್ಲ ದಾಖಲೆಗಳು ಅಗತ್ಯ?
ಈ ಯೋಜನೆ ಪ್ರಾರಂಭಿಸಲು ನೀವು ಬ್ಯಾಂಕ್ ಉಳಿತಾಯ ಖಾತೆ ಹಾಗೂ ಆಧಾರ್ ಕಾರ್ಡ್ ಹೊಂದಿರೊದು ಕಡ್ಡಾಯ. ಇನ್ನು ಈ ಯೋಜನೆಯ ಫಲಾನುಭವಿಯಾಗಲು ಕನಿಷ್ಠ ವಯೋಮತಿ 18 ವರ್ಷ ಹಾಗೂ ಗರಿಷ್ಠ ವಯೋಮತಿ 40 ವರ್ಷ.
ನೋಂದಣಿ ಮಾಡೋದು ಎಲ್ಲಿ?
ಈ ಯೋಜನೆಯಲ್ಲಿ ನೋಂದಣಿ ಮಾಡಲು ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ತೆರಳಿ ನೋಂದಣಿ ಮಾಡಬಹುದು. ಇನ್ನು ಕಾರ್ಮಿಕರು ಸಾಮಾನ್ಯ ಸೇವಾ ಕೇಂದ್ರದ ಸೈಟ್ ನಲ್ಲಿ ಖಾತೆ ತರೆಯಬಹುದು. ಈ ಯೋಜನೆಗಾಗಿ ಸರ್ಕಾರ ವೆಬ್ ಪೋರ್ಟಲ್ ಕೂಡ ರಚಿಸಿದೆ. ಈ ಸೌಲಭ್ಯಗಳ ಮೂಲಕ ಕಲೆ ಹಾಕಿದ ಎಲ್ಲ ಮಾಹಿತಿಗಳನ್ನು ಭಾರತ ಸರ್ಕಾರಕ್ಕೆ ಕಳುಹಿಸಲಾಗುತ್ತದೆ.
ಎಷ್ಟು ಹೂಡಿಕೆ ಮಾಡಬೇಕು?
18 ವರ್ಷ ವಯಸ್ಸಿನವರು ತಿಂಗಳಿಗೆ 55ರೂ. ಹೂಡಿಕೆ ಮಾಡಬೇಕು. 19 ವರ್ಷದವರು 58ರೂ., 20 ವರ್ಷದವರು 61ರೂ. ಹೂಡಿಕೆ ಮಾಡಬೇಕು. ಇನ್ನು 21 ವರ್ಷದವರು 64ರೂ. ಹೂಡಿಕೆ ಮಾಡಬೇಕು. ಇನ್ನು 22 ನೇ ವಯಸ್ಸಿನವರು 68ರೂ., 23ನೇ ವಯಸ್ಸಿನವರು 72 ರೂ. ಹೂಡಿಕೆ ಮಾಡಬೇಕು. ಇನ್ನು 24 ವಯಸ್ಸಿನವರು ಮಾಸಿಕ 76ರೂ., 25 ವಯಸ್ಸಿನವರಿಗೆ 80ರೂ. ಹಾಗೂ 26ನೇ ವಯಸ್ಸಿನವರು 85 ರೂ., 27ನೇ ವಯಸ್ಸಿನವರು 90 ರೂ., 28ನೇ ವಯಸ್ಸಿನವರು 95ರೂ. ಹೂಡಿಕೆ ಮಾಡಬೇಕು. ಹೀಗೆ 40 ವಯಸ್ಸಿನ ತನಕ ಬೇರೆ ಬೇರೆ ಮೊತ್ತವನ್ನು ಹೂಡಿಕೆ ಮಾಡಬೇಕು. 40ನೇ ವಯಸ್ಸಿನಲ್ಲಿ 200ರೂ. ಹೂಡಿಕೆ ಮಾಡಬೇಕು.