ಬೆಂಗಳೂರು :- ನಗರ ಸಂಚಾರ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ನಂಬರ್ ಪ್ಲೇಟ್ಗಳ ದುರ್ಬಳಕೆ ಮಾಡಿಕೊಂಡು ಸಂಚಾರಿ ನಿಯಮ ಉಲ್ಲಂಘನೆ ಮಾಡುವವರನ್ನು ನಿಯಂತ್ರಿಸಲು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಕಣ್ಗಾವಲು ಹೆಚ್ಚಿಸಲು ಮತ್ತು ಸಂಚಾರ ಉಲ್ಲಂಘಿಸುವವರ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲು ಮತ್ತು ಅವರ ವಿರುದ್ಧ ಕ್ರಮವನ್ನು ಕೈಗೊಳ್ಳಲು ನಗರದಾದ್ಯಂತ ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲು ಪ್ರಾರಂಭಿಸಿದ್ದರು.

ಆದರೆ ಬೆಂಗಳೂರಿನ ಹಲವಾರು ಸ್ಥಳಗಳಲ್ಲಿ ಇಂತಹ ಕ್ಯಾಮೆರಾಗಳನ್ನು ಅಳವಡಿಸಿದ ನಂತರ ಹಲವಾರು ವಾಹನ ಮಾಲೀಕರು ಸಿಕ್ಕಿಬೀಳುವುದನ್ನು ತಪ್ಪಿಸಲು ತಮ್ಮ ನಂಬರ್ ಪ್ಲೇಟ್ಗಳನ್ನು ಬದಲಾಯಿಸಲು ಪ್ರಾರಂಭಿಸಿದರು. ಅಂತಹ ವಾಹನಗಳ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿರುವುದನ್ನು ಗಮನಿಸಿದ ಪೊಲೀಸರು ತಪ್ಪಿತಸ್ಥ ವಾಹನ ಚಾಲಕರ ವಿರುದ್ಧ ಕ್ರಮ ಕೈಗೊಂಡು ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿದರು.
ಕಠಿಣ ಕ್ರಮಗಳ ಹೊರತಾಗಿಯೂ ಕೆಲವು ಚಾಲಕಿ ಸವಾರರು ಕಣ್ಗಾವಲು ಕ್ಯಾಮೆರಾಗಳನ್ನು ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ಗಳನ್ನು ಮುಚ್ಚಿಕೊಂಡು ಓಡಾಡುತ್ತಿದ್ದರು. ಇಲ್ಲವೇ ಉದ್ದೇಶಪೂರ್ವಕವಾಗಿ ಅವುಗಳ ಮೇಲೆ ಮಸಿ ಬಳೆದುಕೊಂಡು ಓಡಾಡುತ್ತಿದ್ದರು. ಕೆಲವು ವಾಹನ ಚಾಲಕರು ನಂಬರ್ ಪ್ಲೇಟ್ ಅನ್ನು ಅದರ ಮೇಲೆ ಟೇಪ್ ಅಥವಾ ಪ್ಲಾಸ್ಟಿಕ್ ಹಾಕುವ ಮೂಲಕ ಅಥವಾ ಕೆಲವು ಅಂಕೆಗಳನ್ನು ಕಪ್ಪಾಗಿಸುವ ಮೂಲಕ ಅಥವಾ ಹೆಲ್ಮೆಟ್ ಅಥವಾ ಕಾಲಿನಿಂದ ಅದನ್ನು ಮುಚ್ಚುವ ಮೂಲಕ ತಪ್ಪಿಸಿಕೊಂಡು ಓಡಾಡುತ್ತಿದ್ದರು
ಈ ಬಗ್ಗೆ ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಎಂ.ಎನ್.ಅನುಚೇತ್ ಮಾತನಾಡಿ, ಪೊಲೀಸರು ಇಂತಹ ಎಲ್ಲಾ ಕಾನೂನುಬಾಹಿರ ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದಾರೆ. ನೋಂದಣಿ ನಂಬರ್ ಪ್ಲೇಟ್ಗಳನ್ನು ದುರ್ಬಳಕೆ ಮಾಡುವುದರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿದರೆ ಮೋಟಾರು ವಾಹನ ಕಾಯ್ದೆಯಡಿ ಮಾತ್ರವಲ್ಲದೆ ವಂಚನೆಗಾಗಿಯೂ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದರು.
ನಂಬರ್ ಪ್ಲೇಟ್ ನಿಯಮ ಉಲ್ಲಂಘಿಸಿ ಒಂದು ಪ್ರಕರಣದ ಬಗ್ಗೆ ಕ್ರಮ ಕೈಗೊಂಡ ಕೆಎಸ್ ಲೇಔಟ್ ಸಂಚಾರ ಪೊಲೀಸರು 20 ವರ್ಷದ ಪೆಟ್ರೋಲ್ ಪಂಪ್ ಸ್ಟೇಷನ್ ನೌಕರನನ್ನು ಪತ್ತೆಹಚ್ಚಿದ್ದಾರೆ. ಆತ ತಾನು ಸಿಕ್ಕಿಬೀಳುವುದನ್ನು ತಪ್ಪಿಸಲು ತನ್ನ ವಾಹನದ ನೋಂದಣಿ ನಂಬರ್ ಪ್ಲೇಟ್ನಲ್ಲಿ ಒಂದು ಅಂಕಿಯನ್ನು ಮರೆಮಾಡಿದ್ದನು. ಘಟನೆಯ ವಿಡಿಯೋ ಹೊಂದಿದ್ದ ಪೊಲೀಸರು ಆತನ ವಿಳಾಸ ಪತ್ತೆ ಹಚ್ಚಿದ್ದಾರೆ.

