ಹುಬ್ಬಳ್ಳಿ: ‘ದೇಶ ವಿಭಜನೆ ಸಂದರ್ಭ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗದೇ ಇದ್ದಿದ್ದರೆ, ಭಾರತದಲ್ಲಿ ಹಿಂದೂ ಬಾವುಟ ಹಾರುತ್ತಿರಲಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ನಗರದ ನೆಹರೂ ಮೈದಾನದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಸವಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ, ದೇಶ ಒಡೆಯಲು ನೆಹರೂ ಕಾರಣ ಎಂದು ಬಿಜೆಪಿಗರು ಪದೇಪದೇ ಹೇಳುತ್ತಾರೆ. ಆಗಾಗ ಗಾಂಧೀಜಿಯವರನ್ನು ಸಹ ಬೈಯ್ಯುತ್ತಾರೆ. ದೇಶ ವಿಭಜನೆಯಾದಾಗ ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿ ಗುರುತಿಸಿಕೊಂಡಾಗ, ಇಲ್ಲಿಯ ಮುಸ್ಲಿಮರು ಅಲ್ಲಿಗೆ ಹೋಗಿದ್ದಾರೆ. ಅವರು ಹೋದರೆ ನಿಮಗೇನು ತೊಂದರೆ’ ಎಂದು ಪ್ರಶ್ನಿಸಿದರು.
ಚುನಾವಣೆ ಹತ್ತಿರ ಬಂದಾಗ ಮುಸ್ಲಿಮರ ಬಗ್ಗೆ, ರಾಮನ ಬಗ್ಗೆ ಮಾತನಾಡಿ ಮತ ಯಾಚಿಸಬೇಡಿ. ಮಾಡಿರುವ ಅಭಿವೃದ್ಧಿ ಕಾರ್ಯಗಳೇನು ಎಂದು ಮತದಾರರ ಮುಂದಿಡಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವೀಸ್ ಬ್ಯಾಂಕ್ನಲ್ಲಿ ಇಟ್ಟಿದ್ದ ಹಣ ತರುತ್ತೇವೆ, ಬಡವರ ಖಾತೆಗೆ ₹15 ಲಕ್ಷ ಜಮಾ ಮಾಡುತ್ತೇವೆ, ನಿರುದ್ಯೋಗ ಹೋಗಲಾಡಿಸುತ್ತೇವೆ ಎಂದೆಲ್ಲ ಆಶ್ವಾಸನೇ ನೀಡಿದ್ದೀರಿ. ಅವೆಲ್ಲ ಏನಾಯಿತು? ಮೋದಿ ಅವರೇ ಇನ್ನು ಮುಂದಾದರೂ ಸುಳ್ಳು ಹೇಳುವುದನ್ನು ಬಿಡಿ’ ಎಂದು ಆಗ್ರಹಿಸಿದರು.