ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಜವಾದ ಜಾತ್ಯಾತೀತರಾದರೆ ಜನವರಿ 22ರಂದು ರಜೆ ಘೋಷಿಸಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಜ.22ರಂದು ರಜೆ ಘೋಷಿಸದ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆಯ ಬಗ್ಗೆ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಜೆ ಕೊಡುವ ಸದ್ಬುದ್ದಿಯನ್ನು ಪ್ರಭು ಶ್ರೀರಾಮ ಚಂದ್ರ ನೀಡಲಿ ಎಂದು ಕುಟುಕಿದ್ದಾರೆ.
ಹಿಂದೂಗಳ ಭಾವನೆಗೆ ಅಪಮಾನ ಮಾಡುವ ಸರ್ಕಾರ ರಾಜ್ಯದಲ್ಲಿದೆ. ಹಿಂದೂಗಳನ್ನು ಅಪಮಾನ ಮಾಡಿ ಮುಸ್ಲಿಂ ಮತ ಗಳಿಸುವ ಸರ್ಕಾರ ಇದು. ದೇಶದ ಪ್ರತಿಯೊಬ್ಬನ ಮನಸಲ್ಲಿ ರಾಮಮಂದಿರ ಉದ್ಘಾಟನೆಯ ಸಂಭ್ರಮ ಇದೆ. ನಂಬಿಕೆಗೆ ಅಪಮಾನ ಮಾಡುವುದು ಒಂದು ಸಂಘಟನೆಯ ನಾಶ ಸಂಕೇತ. ಒಂದೇ ಕೋಮಿನ ವ್ಯವಸ್ಥೆಯಿಂದ ಹೊರಗೆ ಬರಲು ಅವಕಾಶ ಇದೆ. ರಾಮ ಹಲವರಿಗೆ ಒಳ್ಳೆಯ ಬುದ್ದಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.