RCB ವಿರುದ್ಧ ನಾನು ಆಡಿದರೆ ನಾವು ಗೆಲ್ಲುತ್ತಿದ್ವಿ ಎಂದು ರಿಷಬ್ ಪಂತ್ ಹೇಳಿಕೆ ನೀಡಿದ್ದಾರೆ. ಲಕ್ನೋ ವಿರುದ್ಧ ಗೆಲುವು ಸಾಧಿಸಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ರಿಷಭ್ ಪಂತ್, ಕಳೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ನನಗೆ ಆಡಲು ಸಾಧ್ಯವಾಗಿದ್ದರೆ ನಾವು ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತಿತ್ತು ಎಂದು ಹೇಳಿದ್ದಾರೆ. ನಾನು ಆಡಿದ್ದರೆ ನಾವು ಖಂಡಿತವಾಗಿಯೂ ಪಂದ್ಯವನ್ನು ಗೆಲ್ಲುತ್ತಿದ್ದೆವು ಎಂದು ನಾನು ಹೇಳುತ್ತಿಲ್ಲ. ಆದರೆ, ಕೊನೆಯ ಪಂದ್ಯದಲ್ಲಿ ನನಗೆ ಆಡಲು ಅವಕಾಶವಿದ್ದರೆ ನಮಗೆ ಪ್ಲೇ ಆಫ್ಗೆ ಅರ್ಹತೆ ಪಡೆಯುವ ಉತ್ತಮ ಅವಕಾಶವಿತ್ತು ಎಂದು ಪಂತ್ ಹೇಳಿದ್ದಾರೆ. ಲಕ್ನೋ ವಿರುದ್ಧದ ಪಂದ್ಯದ ಕುರಿತು ಮಾತನಾಡಿದ ಪಂತ್, ”ನಿಕೋಲಸ್ ಪೂರನ್ ನಮಗೆ ತುಂಬಾ ತೊಂದರೆ ಕೊಟ್ಟರು. ನಾವು ಕೆಲವು ಯೋಜನೆಗಳನ್ನು ಹೊಂದಿದ್ದೇವೆ. ಉತ್ತಮ ಸವಾಲು ನೀಡಿದ್ದೆವು. ನಮ್ಮ ಬೌಲಿಂಗ್ ಕೂಡ ಚೆನ್ನಾಗಿ ಸಾಗುತ್ತಿತ್ತು. ಈ ಋತುವಿನಲ್ಲಿ ನಾವು ಬಹಳಷ್ಟು ನಿರೀಕ್ಷೆಗಳೊಂದಿಗೆ ಕಣಕ್ಕಿಳಿದೆವು. ಆದರೆ, ಕೆಲವು ಆಟಗಾರರು ಗಾಯಗೊಂಡಿದ್ದಾರೆ. ಕೊನೆಯ ಪಂದ್ಯದಲ್ಲಿ ಸೋತ ನಂತರವೂ ನಾವು ಪ್ಲೇ ಆಫ್ ರೇಸ್ನಲ್ಲಿಯೇ ಇದ್ದೇವೆ. ಈ ಜಯದ ಮೂಲಕ ಕಮ್ಬ್ಯಾಕ್ ಮಾಡಿರುವುದು ಉತ್ತಮವಾಗಿದೆ. ಭಾರತದೆಲ್ಲೆಡೆಯಿಂದ ಬಂದ ಬೆಂಬಲ ನೋಡಿ ಖುಷಿಯಾಯಿತು.
ನನಗೆ ಒಂದೂವರೆ ವರ್ಷದ ನಂತರ ಹಿಂತಿರುಗಲು ಬಹಳ ಸಮಯ ಕಾಯಬೇಕಾಯಿತು. ನಾನು ಸದಾ ಮೈದಾನದಲ್ಲಿ ಇರಲು ಬಯಸುತ್ತೇನೆ,” ಎಂಬುದು ರಿಷಭ್ ಪಂತ್ ಮಾತು.
ಲಕ್ನೋ ವಿರುದ್ಧದ ಜಯದ ಮೂಲಕ ಡೆಲ್ಲಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ ಮತ್ತು -0.377 ರ ನಿವ್ವಳ ರನ್ ರೇಟ್ ಹೊಂದಿದೆ. ಅಂಕಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ (0.528) ಮತ್ತು ಸನ್ ರೈಸರ್ಸ್ ಹೈದರಾಬಾದ್ (0.406) ಉತ್ತಮ ಸ್ಥಿತಿಯಲ್ಲಿವೆ. ಇದು 13 ಪಂದ್ಯಗಳಲ್ಲಿ ಎಲ್ಎಸ್ಜಿಗೆ ಏಳನೇ ಸೋಲು. ಈ ತಂಡ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಎಲ್ಎಸ್ಜಿ ತನ್ನ ಕೊನೆಯ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಬೇಕಿದೆ.