ಬೆಂಗಳೂರು: ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಮೊದಲ ಬಾರಿಗೆ ಆಗಮಿಸಿದ ಹೆಚ್.ಡಿ ಕುಮಾರಸ್ವಾಮಿ ಅವರಿಗಿಂದು ಅದ್ಧೂರಿ ಸ್ವಾಗತ ಕೋರಲಾಯಿತು. ಮಹಿಳಾ ಘಟದ ಕಾರ್ಯಕರ್ತರು ಆರತಿ ಬೆಳಗಿ ಸ್ವಾಗತ ಕೋರಿದರು. ಅಲ್ಲದೇ ಜೆಡಿಎಸ್ ವತಿಯಿಂದ ಇಲ್ಲಿನ ಜೆಪಿ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕರ್ತರು ಪುಷ್ಪನಮನ ಸಲ್ಲಿಸಿ, ಕುಣಿದು ಕುಪ್ಪಳಿಸಿದರು.
ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿಕೆ, ಪಕ್ಷದ ಕಾರ್ಯಕರ್ತರ ದುಡಿಮೆಗೆ 2008 ರಿಂದ ಯಾವುದೇ ರೀತಿಯ ಪ್ರತಿಫಲ ಸಿಕ್ಕಿರಲಿಲ್ಲ. ಅಂತಹ ಸಮಯದಲ್ಲಿ ಪಕ್ಷವನ್ನ ಉಳಿಸಿದ ಬೆಳೆಸಿದ ಲಕ್ಷಾಂತರ ಕಾರ್ಯಕರ್ತರು ಈ ರಾಜ್ಯದಲ್ಲಿ ಇದ್ದೀರಿ. ನಿಮಗೆ ಸಾಷ್ಟಾಂಗ ನಮಸ್ಕಾರ ಮಾಡ್ತೀನಿ.
ಮೋದಿ ಅವರು 2 ಬಾರಿ ಪ್ರಧಾನಿಯಾಗಿ ಉತ್ತಮವಾಗಿ ಕೆಲಸ ಮಾಡಿ, 3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರ ಮಂತ್ರಿ ಮಂಡಲದಲ್ಲಿ ಕೇಂದ್ರದ ಮಂತ್ರಿ ಆಗಿದ್ದೇನೆ, ನನ್ನ ಪಾಲಿಗೆ ಬಂದಿರೋ ಈ ಮಂತ್ರಿ ಸ್ಥಾನವನ್ನ ಕರ್ನಾಟಕದ ಜನರಿಗೆ ಅರ್ಪಣೆ ಮಾಡ್ತೀನಿ ಎಂದು ಭಾವುಕರಾದರು.
2018ರ ದಿನವನ್ನ ನಾನು ನೆನಪು ಮಾಡಿಕೊಳ್ತೀನಿ. ಅವತ್ತು ಬಹುಮತ ಬಾರದೇ ಇದ್ದಾಗ ಕಾಂಗ್ರೆಸ್ನವರು ಬಂದರು. ಕಾಂಗ್ರೆಸ್ನ ದೆಹಲಿ ನಾಯಕರು ದೇವೇಗೌಡರ ಮನೆಗೆ ಬಂದು ಒತ್ತಾಯ ಹಾಕಿ ನನಗೆ ಬಲವಂತವಾಗಿ ಸಿಎಂ ಸ್ಥಾನ ಕೊಟ್ಟಿದ್ದರು. ಇವತ್ತು ನಾನು ದೆಹಲಿಯಿಂದ ಕನ್ನಡ ನಾಡಿನ ಮಣ್ಣಿಗೆ ಪಾದಾರ್ಪಣೆ ಮಾಡಿದ್ದೇನೆ. ಆವತ್ತು ನಾನು ಸಿಎಂ ಇದ್ದಾಗ ಇದೇ ಜಾಗದಲ್ಲಿ ಸನ್ಮಾನ ಮಾಡಿದ್ರಿ.
ಅಂದು ಕಣ್ಣಲ್ಲಿ ನೀರು ಹಾಕಿದ್ದೆ. ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದಾಗ ನಮ್ಮನ್ನ ಯಾವ ರೀತಿ ನಡೆಸಿ ಕೊಂಡಿದ್ದರು ಅಂತ ಹೇಳಿದ್ದೆ. ವಿಷಕಂಠ ಆಗಿದ್ದೇ ಅಂತ ಹೇಳಿದ್ದೆ. ಆದರೆ ಇವತ್ತು ನಾನು ಅತ್ಯಂತ ಸಂತೋಷದಿಂದ ಯಾವುದೇ ಕಲ್ಮಷ ಇಟ್ಟುಕೊಳ್ಳದೇ ಪ್ರಾಮಾಣಿಕ ನನ್ನ ಮಾತು ಹೇಳ್ತಿದ್ದೇನೆ. ಮೊದಲಿಗೆ ಮೋದಿ ಅವರಿಗೆ ಕಾರ್ಯಕರ್ತ ಸಮ್ಮುಖದಲ್ಲಿ ಧನ್ಯವಾದ ಸಲ್ಲಿಸುತ್ತೇನೆ ಎಂದು ನುಡಿದರು.