ಢಾಕಾ: ಬಾಂಗ್ಲಾದೇಶದಿಂದ ಪಲಾಯಗೊಂಡಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಮತ್ತು ಮಾಜಿ ಮಿಲಿಟರಿ ಜನರಲ್ಗಳು ಮತ್ತು ಮಾಜಿ ಪೊಲೀಸ್ ಮುಖ್ಯಸ್ಥರು ಸೇರಿದಂತೆ 11 ಇತರರ ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ ಬಲವಂತದ ನಾಪತ್ತೆ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಎರಡನೇ ಬಂಧನ ವಾರಂಟ್ ಹೊರಡಿಸಿದೆ.
ಜನವರಿ 6ರಂದು ಈ ಬಂಧನ ವಾರಂಟ್ ಹೊರಡಿಸಲಾಗಿದೆ. ಇದು ಶೇಖ್ ಹಸೀನಾ ವಿರುದ್ಧ ಹೊರಡಿಸಲಾದ ಎರಡನೇ ಬಂಧನ ವಾರಂಟ್ ಇದಾಗಿದೆ. ಬಾಂಗ್ಲಾ ನ್ಯಾಯಮಂಡಳಿಯು ಹಸೀನಾ ವಿರುದ್ಧ ಇದುವರೆಗೆ ಮೂರು ಪ್ರಕರಣಗಳನ್ನು ದಾಖಲಿಸಿದೆ.
ನೂರಾರು ಬಲವಂತದ ನಾಪತ್ತೆ ಪ್ರಕರಣದ ಸಂಬಂಧ ಹಸೀನಾ ಸೇರಿದಂತೆ 12 ವ್ಯಕ್ತಿಗಳನ್ನು ಬಂಧಿಸಿ ಫೆಬ್ರವರಿ 12 ರಂದು ನ್ಯಾಯಾಧಿಕರಣದ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯದ ಆದೇಶ ಪೊಲೀಸ್ ಮಹಾನಿರೀಕ್ಷಕರಿಗೆ ನಿರ್ದೇಶಿಸಲಾಗಿದೆ.
ಹಸೀನಾ ವಿರುದ್ಧ ಹೊರಡಿಸಲಾಗಿದೆ ಎರಡನೇ ಬಂಧನ ವಾರಂಟ್ ಕುರಿತು ಮಾತನಾಡಿರುವ ಭಾರತದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ವಿಕಾಸ್ ಸಿಂಗ್, “ಅಂತಾರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ ಬಾಂಗ್ಲಾದೇಶದಲ್ಲಿ ದೇಶೀಯ ಕಾನೂನಿನ ಆಧಾರದ ಮೇಲೆ ಸ್ಥಾಪಿಸಲಾದ ನ್ಯಾಯಮಂಡಳಿಯಾಗಿದೆ. ನ್ಯಾಯಾಲಯವು ಕೆಲವು ಅಂತರರಾಷ್ಟ್ರೀಯ ಅಪರಾಧಗಳನ್ನು ಗುರುತಿಸುತ್ತದೆ ಮತ್ತು ಈ ಬಂಧನ ವಾರಂಟ್ ಬಾಂಗ್ಲಾದೇಶದ ದೇಶೀಯ ನ್ಯಾಯಾಲಯ ಹೊರಡಿಸಿರುವ ಬಂಧನ ವಾರಂಟ್ ಆಗಿದೆ. ಈ ವಾರೆಂಟ್ ಜಾರಿಯಾಗಬೇಕಾದರೆ ಆಕೆ ಭಾರತದಿಂದ ಹಸ್ತಾಂತರ ಆಗಬೇಕು. ಭಾರತದಿಂದ ಹಸ್ತಾಂತರಿಸಿದ ನಂತರವೇ ಈ ವಾರಂಟ್ ನ್ನು ಜಾರಿಗೆ ತರಬಹುದು ಎಂದಿದ್ದಾರೆ.