ICC ಟೆಸ್ಟ್ ಶ್ರೇಯಾಂಕ ಪಟ್ಟಿಯ ಟಾಪ್ ಹತ್ತರಲ್ಲಿ ರೋಹಿತ್, ವಿರಾಟ್ ಕೊಹ್ಲಿ ಈ ಬಾರಿ ಸ್ಥಾನ ಪಡೆದಿದ್ದಾರೆ.
ಈ ಬಾರಿ ಅಗ್ರಸ್ಥಾನದಲ್ಲಿ ಇಂಗ್ಲೆಂಡ್ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಜೋ ರೂಟ್ ಕಾಣಿಸಿಕೊಂಡಿದ್ದಾರೆ. ಕಳೆದ ಬಾರಿ ದ್ವಿತೀಯ ಸ್ಥಾನದಲ್ಲಿದ್ದ ರೂಟ್, ಕೇನ್ ವಿಲಿಯಮ್ಸನ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ
ಇನ್ನು ಈ ಬಾರಿ ಟೀಮ್ ಇಂಡಿಯಾದ ಮೂವರು ಬ್ಯಾಟರ್ಗಳು ಟಾಪ್-10 ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಇವರಲ್ಲಿ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಕೂಡ ಒಬ್ಬರು ಎಂಬುದು ಮತ್ತೊಂದು ವಿಶೇಷ. ಇನ್ನುಳಿದಂತೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಗ್ರ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ಜೋ ರೂಟ್ ಒಟ್ಟು 872 ಅಂಕಗಳನ್ನು ಕಲೆಹಾಕಿದರೆ, ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ 859 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ಹಾಗೆಯೇ 768 ಅಂಕಗಳನ್ನು ಹೊಂದಿರುವ ಪಾಕ್ ತಂಡದ ನಾಯಕ ಬಾಬರ್ ಆಝಂ ಈ ಬಾರಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 751 ಅಂಕಗಳೊಂದಿಗೆ 6ನೇ ಸ್ಥಾನಕ್ಕೇರಿದರೆ, 740 ಅಂಕ ಪಡೆದಿರುವ ಯಶಸ್ವಿ ಜೈಸ್ವಾಲ್ 8ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ 737 ಅಂಕಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಈ ಬಾರಿ ಕೂಡ 10ನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.