ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ವಿರುದ್ಧ ಮ್ಯಾಚ್ ರೆಫರಿ ಕಠಿಣ ಕ್ರಮ ಕೈಗೊಂಡಿದ್ದಾರೆ. ಆರಂಭವಾದ ಆಸ್ಟ್ರೇಲಿಯಾ ವಿರುದ್ಧದ ಐದು ಟೆಸ್ಟ್ಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಸೀಸ್ ಪದಾರ್ಪಣೆ ಆಟಗಾರ ಕಾನ್ಸ್ಟಾಸ್ ಭುಜಕ್ಕೆ ಡಿಕ್ಕಿ ಹೊಡೆದಿದ್ದರು.
ಇಬ್ಬರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಂತೆ ಅಂಪೈರ್ಗಳು ಮತ್ತು ಇತರ ಆಟಗಾರರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ನಡುವಿನ ಕಿತ್ತಾಟದ ವಿಡಿಯೋ ವೈರಲ್ ಆಗಿದೆ.
ಆಗಿದ್ದೇನು?
ಜಸ್ಪ್ರೀತ್ ಬುಮ್ರಾ ಇನಿಂಗ್ಸ್ನ 11ನೇ ಓವರ್ ಎಸೆಯುತ್ತಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ಕೀಪರ್ ಪಂತ್ ಕಡೆಗೆ ಬಾಲ್ ಹಿಡಿದುಕೊಂಡು ಬರುತ್ತಿದ್ದಾಗ ಇಂದು ಟೆಸ್ಟ್ ಕ್ಯಾಪ್ ಧರಿಸಿದ ಸ್ಯಾಮ್ಗೆ ಭುಜದಿಂದ ಡಿಕ್ಕಿ ಹೊಡೆದಿದ್ದಾರೆ. ಕೂಡಲೇ ಸಿಟ್ಟಾದ ಸ್ಯಾಮ್ ಕೊಹ್ಲಿಯನ್ನು ದಿಟ್ಟಿಸಿ ನೋಡಿದ್ದಾರೆ. ಈ ವೇಳೆ ಕೊಹ್ಲಿ ಸ್ಯಾಮ್ ಜೊತೆ ಜಗಳಕ್ಕೆ ಇಳಿದಿದ್ದಾರೆ. ಕೊನೆಗೆ ಆರಂಭಿಕ ಆಟಗಾರ ಖವಾಜ ಹಾಗೂ ಅಂಪೈರ್ಗಳು ಬಂದು ಇಬ್ಬರನ್ನು ಸಮಾಧಾನ ಮಾಡಿದ್ದಾರೆ.
ಐಸಿಸಿ ನಿಯಮ ಏನು?
ಯಾವುದೇ ಆಟಗಾರ ತನ್ನ ಸಹ ಆಟಗಾರ, ಎದುರಾಳಿ, ಆಟಗಾರನ ಸಹಾಯಕ್ಕೆ ಬರುವ ಸಿಬ್ಬಂದಿ, ಅಂಪೈರ್, ಮ್ಯಾಚ್ ರೆಫ್ರಿ ಅಥವಾ ಮೈದಾನದಲ್ಲಿ ಯಾವುದೇ ಇತರೆ ವ್ಯಕ್ತಿಯೊಂದಿಗೆ ಅನುಚಿತವಾಗಿ ವರ್ತನೆ ಮಾಡುವಂತಿಲ್ಲ. ದೈಹಿಕವಾಗಿ ಹಲ್ಲೆ ಅಥವಾ ನಿಂದಿಸಿದರೆ ಶಿಕ್ಷೆ ವಿಧಿಸಬಹುದು.
ಮೂಲಗಳ ಪ್ರಕಾರ ಪಂದ್ಯದ 20% ಶುಲ್ಕ ಕಡಿತವಾಗಿದೆ. ಅನುಚಿತ ವರ್ತನೆಗಾಗಿ ಕೊಹ್ಲಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ ಎಂದು ವರದಿಯಾಗಿದೆ.