ಕಲಬುರಗಿ: ಬೀದರ್ ಲೋಕಸಭಾ ಕ್ಷೇತ್ರಕ್ಕೆ ನಾನು ಟಿಕೆಟ್ ಆಕಾಂಕ್ಷಿ. ಈ ಸಂಬಂಧ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿ ಟಿಕೆಟ್ ನೀಡುವಂತೆ ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿಯವರ ಸಲಹೆಗಾರ, ಆಳಂದ ಶಾಸಕ ಬಿ.ಆರ್.ಪಾಟೀಲ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಬಸವಣ್ಣನವರ ಪರಮ ಭಕ್ತ. ಇಡೀ ಬೀದರ್ ಜಿಲ್ಲೆ ಬಸವಣ್ಣನವರ ಕರ್ಮ ಭೂಮಿ,
ಬಸವಣ್ಣನವರ ನಂಬಿಕೆ ಇರುವ ಎಲ್ಲಾ ಪ್ರಗತಿಪರ ಸಂಘಟನೆಗಳು, ಎಲ್ಲಾ ಜಾತಿ, ಧರ್ಮದವರು ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು. ನಾನು ಶಾಸಕನಾಗಿರುವ ಆಳಂದ ಮತಕ್ಷೇತ್ರ ಬೀದರ್ ಲೋಕಸಭಾ ಕ್ಷೇತ್ರದಡಿಯಲ್ಲೇ ಬರಲಿದೆ.
ಹೀಗಾಗಿ ಲೋಕಸಭೆಯಲ್ಲಿ ಬೀದರ್ನಿಂದ ಕಣಕ್ಕಿಳಿಯುವ ಬಗ್ಗೆ ಶೀಘ್ರವೇ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಬೇಡಿಕೆ ಮಂಡಿಸುವೆ ಎಂದರು. ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇವರನ್ನೆಲ್ಲ ಕಂಡು ಬೀದರ್ ಟಿಕೆಟ್ ಕೇಳುವೆ ಎಂದರು.
ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನಾಯಕರ ಗೈರು ಬಗ್ಗೆ ಪ್ರತಿಕ್ರಿಯಿಸಿ, ದೇಶದಲ್ಲಿ ಅದೊಂದು ದೊಡ್ಡ ರಾಜಕೀಯ ಆಗಿ ಬಿಟ್ಟಿದೆ. ನಾಲ್ಕು ಜನ ಶಂಕರಾಚಾರ್ಯರು ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ. ಇದು ಪ್ರಧಾನಿ ಮೋದಿಯವರಿಗೆ ದೊಡ್ಡ ಹಿನ್ನಡೆ ಎಂದು ಹೇಳಿದರು.