ಬೆಂಗಳೂರು: ಕರ್ನಾಟಕ ಎದುರಿಸುತ್ತಿರುವ ಕಾವೇರಿ ಜಲ ಸಂಕಷ್ಟವನ್ನು ಪರಿಹಾರ ಮಾಡುವ ಶಕ್ತಿ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ. ಈ ಚುನಾವಣೆ ಮುಗಿದ ನಂತರ ಮತ್ತೆ ಪ್ರಧಾನಿ ಆಗಲಿರುವ ಅವರು, ಈ ಜಲ ಸಂಕಷ್ಟಕ್ಕೆ ಪರಿಹಾರ ನೀಡಲಿದ್ದಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಹೇಳಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಪ್ರತಿ ವರ್ಷ ತಮಿಳುನಾಡು ರಾಜ್ಯದವರು ಕಾವೇರಿ ಜಲ ನಿರ್ವಹಣಾ ಸಮಿತಿ ಹಾಗೂ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಮುಂದೆ ಕರ್ನಾಟಕದಿಂದ ನೀರು ಕೊಡಿಸಿ ಎಂದು ಅರ್ಜಿ ಹಾಕುತ್ತಾರೆ. ನಮ್ಮ ಬಳಿ ನೀರು ಇಲ್ಲದೆ ಇದ್ದರೂ ನೀರು ಬಿಡಿ ಅಂತಾರೆ. ನಮ್ಮ ಅಧಿಕಾರಿಗಳು ಏನೇ ವಾದ ಮಾಡಿದರೂ ಪ್ರಯೋಜನ ಆಗಿಲ್ಲ. ಕಾವೇರಿ ಪ್ರಾಧಿಕಾರದವರು ಯಾವತ್ತು ಕೂಡ ನಮ್ಮ ರಾಜ್ಯಕ್ಕೆ ಬಂದು ನೀರು ಎಷ್ಟು ಇದೆ ಅಂತ ನೋಡಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ರಾಜಕೀಯ ಬಿಟ್ಟು ಹೋರಾಡಬೇಕು:
ಕಾವೇರಿ ಸಮಸ್ಯೆಗೆ ಪರಿಹಾರ ಇದೆ. ಪ್ರಧಾನಿ ಮೋದಿ ಅವರಿಗೆ ನಮಗೆ ಆಗಿರುವ ಅನ್ಯಾಯ ಮನ ಮುಟ್ಟುವಂತೆ ನಾವು ಒಟ್ಟಾಗಿ ಹೋರಾಡಬೇಕು. ಇದರಲ್ಲಿ ರಾಜಕೀಯ ಇರಬಾರದು. ರಾಜಕೀಯ ಪಕ್ಷಗಳು ಒಟ್ಟಾಗಿ ಹೋರಾಟ ಮಾಡಬೇಕು. ನಾನು ಇನ್ನೂ ಎರಡೂವರೆ ವರ್ಷ ರಾಜ್ಯಸಭೆಯಲ್ಲಿ ಇರುತ್ತೇನೆ. ಹೊರಾಡುತ್ತೇನೆ, ನಾನು ಸಾಯುವವರೆಗೂ ಕಾವೇರಿ ಬಗ್ಗೆ ಹೋರಾಟ ಮಾಡುತ್ತೇನೆ. ರಾಜ್ಯದ ಜನರಿಗೆ ನ್ಯಾಯ ಸಿಗುವವರೆಗೂ ವಿರಮಿಸುವುದಿಲ್ಲ. ನನ್ನ ಕೊನೆಯುಸಿರು ಇರೋವರೆಗೂ ಹೋರಾಟ ಮಾಡ್ತೀನಿ ಎಂದು ಗದ್ಗದಿತರಾರು ಮಾಜಿ ಪ್ರಧಾನಿಗಳು.
ನಾನು ಸಂಸತ್ ಅಧಿವೇಶನದಲ್ಲಿ ಭಾಗವಹಿಸುತ್ತೇನೆ. ಕಾವೇರಿ ವಿಚಾರವನ್ನು ನಾನು ಸಂಸತ್ ನಲ್ಲಿ ಪ್ರಸ್ತಾಪ ಮಾಡುತ್ತೇನೆ. ಕಾವೇರಿ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬೇಕು ಅಂತ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದೇನೆ.
ನೀರು ಇಲ್ಲದಿದ್ದರೂ ನೀರು ಬಿಡಿ ಎನ್ನುವುದು ರಾಜ್ಯಕ್ಕೆ ಮರಣಶಾಸನ:
ನಮ್ಮ ಜಲಾಶಯಗಳಲ್ಲಿ ನೀರು ಇಲ್ಲದೆ ಇದ್ದರೂ ನೀರು ಬಿಡಿ ಅನ್ನೋದು ಕರ್ನಾಟಕಕ್ಕೆ ಮರಣಶಾಸನ ಎಂದು ಆಕ್ರೋಶ ವ್ಯಕ್ತಪಡಿಸಿದ ಮಾಜಿ ಪ್ರಧಾನಿಗಳು; ತಮಿಳುನಾಡಿನವರಿಗೆ ಶಕ್ತಿ ಇದೆ. ಹೀಗಾಗಿ ನೀರು ತೆಗೆದುಕೊಂಡು ಹೋಗ್ತಿದ್ದಾರೆ. ಆದರೆ, ನ್ಯಾಯ ಕೊಡಬೇಕಾದ ಕಾವೇರಿ ಪ್ರಾಧಿಕಾರ ನಮಗೆ ಅನ್ಯಾಯ ಮಾಡುತ್ತಿದೆ ಎಂದರು.
ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಪ್ರತಿಯೊಂದು ಅಂಶವನ್ನು ನಾನು ಮೋದಿ ಅವರ ಗಮನಕ್ಕೆ ತಂದಿದ್ದೇನೆ. ಆದರೆ, ಮೋದಿ ಅವರು ಕೂಡಲೇ ಎಲ್ಲಾ ಮಾಡಲು ಆಗುವುದಿಲ್ಲ. ನಾವೆಲ್ಲರೂ ಈ ಬಗ್ಗೆ ಹೋರಾಟ ಮಾಡುತ್ತೇವೆ. ಮಳೆ ಇಲ್ಲದೆ ಹೋದರೂ ನೀರು ಬಿಡಿ ಎಂದು ಅದೇಶ ಮಾಡುವುದು ಸರಿಯಲ್ಲ. ನಮಗೆ ನಿರಂತರ ಅನ್ಯಾಯ ಆಗಿದೆ ಎಂದು ಅವರು ನೊಂದು ಹೇಳಿದರು.
ಜಲ ಸಂಪನ್ಮೂಲ ಸ್ಥಾಯಿ ಸಮಿತಿ ಮಾಹಿತಿ ಕೊಟ್ಟಿದ್ದೇನೆ:
ಕೇಂದ್ರ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ ಸ್ಥಾಯಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದೆ. ಹೈಡ್ರೋ ಪವರ್ ಜನರೇಷನ್, ಕುಡಿಯುವ ನೀರಿನ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಸಮಿತಿ ಅಧ್ಯಕ್ಷರು ಭುವನೇಶ್ವರದಿಂದ ಸಭೆ ಪ್ರಾರಂಭ ಮಾಡಿ ನಮ್ಮ ರಾಜ್ಯಕ್ಕೆ ಬಂದಿದ್ದರು. ನಮ್ಮ ರಾಜ್ಯದಿಂದ ನಾನು, ಡಿ.ಕೆ.ಸುರೇಶ್, ಶಿವಕುಮಾರ್ ಉದಾಸಿ ಸದಸ್ಯರು. ಮೊದಲ ಸಭೆಯಲ್ಲಿ ನಾನು, ಡಿ.ಕೆ.ಸುರೇಶ್, ಉದಾಸಿ ಭಾಗವಹಿಸಿದ್ದೆವು ಎಂದು ಅವರು ಮಾಹಿತಿ ನೀಡಿದರು.
ಈ ಸಭೆಯಲ್ಲಿ ಕೊಡಗು ಸೇರಿ ಕಾವೇರಿ ಜಲಾಶಯದ ಹತ್ತು ಜಿಲ್ಲೆಗಳಲ್ಲಿ ರೈತರಿಗೆ ಉಂಟಾಗಿರುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ನಮ್ಮ ರಾಜ್ಯಕ್ಕೆ 8 ಸಾವಿರ ಕೋಟಿ ರೂಪಾಯಿ ಹಣ ಕೃಷ್ಣ ಜಲಾನಯನ ಪ್ರದೇಶದ ಯೋಜನೆಗಳಿಗೆ ಕೇಂದ್ರದಿಂದ ಹಣ ಬಂದಿತ್ತು. ಆದರೆ, ಕಾವೇರಿ ಜಲಾನಯನ ಯೋಜನೆಗೆ ಯಾವುದೇ ಹಣ ಬಂದಿಲ್ಲ. ಈ ಬಗ್ಗೆ ಸಮಿತಿ ಕೇಂದ್ರದ ಗಮನಕ್ಕೆ ತರಬೇಕು. ಇದರ ಬಗ್ಗೆ ನಾನು ಅವರ ಗಮನಕ್ಕೆ ತಂದಿದ್ದೇವೆ ಎಂದು ಮಾಜಿ ಪ್ರಧಾನಿಗಳು ವಿವರ ನೀಡಿದರು.
ಬೆಂಗಳೂರಿಗೆ ಕಾದಿದೆ ಜಲ ಸಂಕ್ಷಟ:
ಮೇಕೆದಾಟು ಯೋಜನೆಗೆ ಕೂಡಲೇ ಅನುಮತಿ ಕೊಡುವಂತೆ ಮನವಿ ಮಾಡಿದ್ದೇವೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರ. ದೇಶದ ಎಲ್ಲ ಜನರಿಗೆ ಉದ್ಯೋಗ, ಜೀವನೋಪಾಯ ನೀಡಿ ಸಲಹುತ್ತಿದೆ. ಮೇಕೆದಾಟು ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತಂದರೆ ಮಾತ್ರ ನಗರದ ನೀರಿನ ಬವಣೆ ತಪ್ಪಿಸಬಹುದು. ಇಲ್ಲವಾದರೆ, ಬೆಂಗಳೂರು ನಗರ ಅತಿ ದೊಡ್ಡ ಜಲ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದೆ ಎಂದು ಮಾಜಿ ಪ್ರಧಾನಿಗಳು ತೀವ್ರ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರು ನಗರದ ಜನಸಂಖ್ಯೆ ಸದ್ಯಕ್ಕೆ 135 ಲಕ್ಷವಿದ್ದು, 2044ರ ವೇಳೆ ಈ ಪ್ರಮಾಣ 3 ಕೋಟಿ ಮೀರಲಿದೆ. ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆಗೆ 64 ಟಿಎಂಸಿ ನೀರಿನ ಅಗತ್ಯ ಇದೆ.
ತಮಿಳುನಾಡಿಗೆ ದೈತ್ಯ ರಾಜಕೀಯ ಶಕ್ತಿ ಇದೆ. ಅವರಿಗೆ ಎಷ್ಟು ನೀರು ಕೊಟ್ಟರು ಸಾಲದು. ತಮಿಳುನಾಡಿನಲ್ಲಿ ಎಲ್ಲಾ ಕಡೆ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ. ಅವರಿಗೆ ಸಮೃದ್ಧವಾಗಿ ಮಳೆ ಬಂದರೂ ನೀರು ಬೇಕು ಎಂದು ಕೇಳುತ್ತಾರೆ. ತಮಿಳುನಾಡಿನ ನೀರಾವರಿಯ ಬಗ್ಗೆ ಕೃಷಿ ವಿಜ್ಞಾನಿಗಳಾದ ಸ್ವಾಮಿನಾಥನ್ ಅವರು ವರದಿ ಕೊಟ್ಟಿದ್ದಾರೆ. ಅವರು ವಾರ್ಷಿಕ
ಬೆಳೆ ಅರಾಮವಾಗಿ ಬೆಳೆಯುತ್ತಾರೆ. ನಮಗೆ ಒಂದು ಬೆಳೆ ಬೆಳೆಯುವುದಕ್ಕೆ ಕೂಡ ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ತಮಿಳುನಾಡಿನಲ್ಲಿ ಕುರುವೈ, ಸಾಂಬಾ, ತಾಲಾಡಿ ಹಾಗೂ ಇನಾ ಬೇಸಾಯ ಸೇರಿದಂತೆ ಒಟ್ಟು 24.71 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಅದೇ ಕರ್ನಾಟಕಕ್ಕೆ ಬಂದರೆ, ಎಲ್ಲಾ ರೀತಿಯ ಬೆಳೆಗಳನ್ನು ಸೇರಿಸಿದರೂ 18.85 ಲಕ್ಷ ಎಕರೆ ಮೀರುವುದಿಲ್ಲ ಎಂದು ಮಾಜಿ ಪ್ರಧಾನಿಗಳು ಅಂಕಿ ಅಂಶಗಳ ಸಮೇತ ವಿವರಣೆ ನೀಡಿದರು.
ಕಾವೇರಿ ಜಲ ವಿವಾದ ಮಂಡಳಿ ಏಕಪಕ್ಷೀಯವಾಗಿ 1991ರಲ್ಲಿ ಮಧ್ಯಂತರ ಆದೇಶ ನೀಡಿ, ಕರ್ನಾಟಕ ರಾಜ್ಯ ತನ್ನ ನೀರಾವರಿ ಅಚ್ಚುಕಟ್ಟನ್ನು 11.20 ಲಕ್ಷ ಹೆಕ್ಟೇರ್ ಗೆ ಸೀಮಿತಗೊಳಿಸುವಂತೆ ಮತ್ತು ತಮಿಳುನಾಡಿನ 205 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಆದೇಶಿಸಿರುವುದರಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಕಾವೇರಿ ಕಣಿವೆಯಲ್ಲಿ ಕೃಷ್ಣರಾಜ ಸಾಗರ, ಹಾರಂಗಿ, ಕಬಿನಿ, ಹೇಮಾವತಿ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿವರ್ಷ ಜೂನ್ ತಿಂಗಳಿಂದ ಮೇ ತಿಂಗಳವರೆಗೆ ಪ್ರತಿ ತಿಂಗಳು 177.25 ಟಿಎಂಸಿ ನೀರು ಬಿಡಬೇಕು ಎನ್ನುವ ಆದೇಶದಿಂದ ಕ್ಲಿಷ್ಟ ಮತ್ತು ಬರಗಾಲದಲ್ಲಿ ಕರ್ನಾಟಕ ರಾಜ್ಯವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಬಗ್ಗೆಯೂ ಸಮಿತಿ ಗಮನಕ್ಕೆ ತರಲಾಗಿದೆ ಎಂದು ದೇವೇಗೌಡರು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಜಿಟಿ ದೇವೆಗೌಡ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್. ತಿಪ್ಪೇಸ್ವಾಮಿ, ಟಿ.ಎ.ಶರವಣ, ಮಾಜಿ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ ಹಾಜರಿದ್ದರು.