ಬಿಗ್ಬಾಸ್ (Bigg Boss Kannada) ಮನೆಯ ಸದಸ್ಯರೆಲ್ಲರೂ ಜಿದ್ದಿಗೆ ಬಿದ್ದವರಂತೆ, ಟಾಸ್ಕ್, ಅಗ್ರೆಶನ್, ಪಾಲಿಟಿಕ್ಸ್, ನಾಮಿನೇಷನ್ ಎಂದೆಲ್ಲ ಪರಸ್ಪರ ದೂಷಣೆಯಲ್ಲಿ, ಹಗ್ಗಜಗ್ಗಾಟದಲ್ಲಿ ತೊಡಗಿಕೊಂಡಿದ್ದರೆ, ‘ನನ್ನ ದಾರಿಯೇ ಬೇರೆ’ ಎನ್ನುವಂತೆ ಶಾಂತರಾಗಿ, ಮನೆಯವರಿಗೆಲ್ಲ ಹಿರಿಯಕ್ಕನಾಗಿ, ಎಲ್ಲರಿಗೂ ಬುದ್ಧಿ ಹೇಳಿ ಸಮಾಧಾನ ಮಾಡುತ್ತ, ನಾಮಿನೇಷನ್ ಮಾಡುವಾಗಲೂ ಅಷ್ಟೇ ಸಂಯಮದಿಂದ ಅಭಿಪ್ರಾಯ ತಿಳಿಸುತ್ತ ಬಂದವರು ಸಿರಿ.
‘ಬಿಗ್ಬಾಸ್ ಮನೆಗೆ ಇವರ ವ್ಯಕ್ತಿತ್ವ ಹೊಂದುವುದಿಲ್ಲ’, ‘ಯಾವುದರಲ್ಲಿಯೂ ಅಷ್ಟಾಗಿ ತೊಡಗಿಕೊಳ್ಳುವುದಿಲ್ಲ’ ‘ಟಾಸ್ಕ್ಗಳಲ್ಲಿ ಪರ್ಫಾರ್ಮ್ ಮಾಡಿಲ್ಲ’ ಇಂಥ ಮಾತುಗಳನ್ನೆಲ್ಲ ಮನೆಯ ಸದಸ್ಯರಿಂದ ಕೇಳುತ್ತಲೇ ಬಿಗ್ಬಾಸ್ ಸೀಸನ್ನ ಮುಕ್ಕಾಲು ದಾರಿಯನ್ನು ಕ್ರಮಿಸಿದ್ದಾರೆ ಸಿರಿ (Siri). ತಮ್ಮ ಸಂಯಮ, ಸಮತೂಕದ ವ್ಯಕ್ತಿತ್ವದಿಂದ ಬಿಗ್ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳ ನೆಚ್ಚಿನ ‘ಅಕ್ಕ’ನಾಗಿದ್ದ ಸಿರಿ, ಈ ವಾರ ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್ಬಾಸ್ ಪ್ರಯಾಣ ಮುಗಿಸಿದ ತಕ್ಷಣ JioCinemaಗೆ ನೀಡಿದ್ದ ಎಕ್ಸ್ಕ್ಲ್ಯೂಸಿವ್ ಸಂದರ್ಶನದಲ್ಲಿ ಅವರು ಈ ಪ್ರಯಾಣದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಅದರ ಅಕ್ಷರರೂಪ ಇಲ್ಲಿದೆ.
ನಾನು ನಿಮ್ಮ ಪ್ರೀತಿಯ ಸಿರಿ. ಬಿಗ್ಬಾಸ್ ಕನ್ನಡ ಸೀಸನ್ 10ನಲ್ಲಿ ನೀವು ನನ್ನನ್ನು ನೋಡಿದ್ದೀರಿ. ಈಗಷ್ಟೇ ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿದ್ದೀನಿ. ಹಿಂದಿನ ವಾರಗಳಲ್ಲಿ ನಾನು ನಾಮಿನೇಷನ್ ಪಟ್ಟಿಯಲ್ಲಿದ್ದಾಗ, ‘ಈ ಸಲ ನಾನು ಹೋಗ್ತೀನಿ’ ಎಂದು ಹೇಳಿಲ್ಲ. ‘ಹೋದ್ರೆ ಇಟ್ಸ್ ಓಕೆ’ ಅನ್ನುವ ರೀತಿಯಲ್ಲಿಯೇ ಇದ್ದೆ. ಈ ಸಲ ಹೊರಗೆ ಬಂದೆ. ನನ್ನಂಥ ವ್ಯಕ್ತಿತ್ವದವಳಿಗೆ ಇದೇನೂ ಸಣ್ಣ ಜರ್ನಿ ಅಲ್ಲ. ಎಕ್ಸ್ಪೆಕ್ಟೇಷನ್ ಇರಲಿಲ್ಲ. ಆಕ್ಸಪ್ಟ್ ಮಾಡಿಕೊಂಡಿದ್ದೇನಷ್ಟೆ.
ನಾನು ಸ್ವಲ್ಪ ಜಾಸ್ತಿನೇ ಪಾಸಿಟೀವ್ ಆಗಿ ಯೋಚನೆ ಮಾಡುವವಳು. ಹಾಗಾಗಿ ಖಂಡಿತ ಸ್ವಲ್ಪ ಬೇಜಾರು ಇದ್ದೇ ಇದೆ. ಫಿನಾಲೆಗೆ ಇಷ್ಟ ಹತ್ತಿರ ಬಂದ ಮೇಲೆ ಬಿಟ್ಟು ಹೋಗ್ತಿದ್ದೀನಲ್ವಾ ಅಂತ. ಆದರೆ ಇಷ್ಟು ವಾರ ಮನೆಯೊಳಗಿದ್ದೆನಲ್ಲ. ಈ ಪ್ರಯಾಣವನ್ನು ಆ ದಿಕ್ಕಿನಿಂದ ನೋಡಿ ಖುಷಿಪಡೋಣ ಅಂದುಕೊಳ್ಳುತ್ತಿದ್ದೇನೆ. ಬಿಗ್ಬಾಸ್ ಅಂದ್ರೆ ಕಿತ್ತಲಾಡಲೇಬೇಕು, ಎಲ್ಲರೂ ಪ್ರವೋಕ್ ಮಾಡ್ತಾರೆ ಎಂದೆಲ್ಲ ನಂಬಿಕೆ ಇದ್ದೇ ಇದೆ. ಆದರೆ ಹಾಗೇನಿಲ್ಲ. ಎಲ್ಲೋ ಒಂದ್ಕಡೆ ನಾನು ನನ್ನ ಕಂಫರ್ಟ್ ಝೋನ್ನಿಂದ ಹೊರಗೆ ಬರಲು ಸ್ವಲ್ಪ ಟೈಮ್ ತಗೊಂಡೆ. ಆದರೆ ನಾನು ಇರೋದೇ ಹಾಗೆ.
ತಪ್ಪೆಲ್ಲಾಯ್ತು ಎಂದು ನನಗೆ ಗೊತ್ತಿಲ್ಲ. ನಾನು ನನ್ನತನವನ್ನು ಬಿಟ್ಟುಕೊಡಬಾರದು. ಅದೇ ರೀತಿ ಉತ್ತರವನ್ನೂ ಸರಿಯಾಗಿ ಕೊಡಬೇಕು ಅಂದುಕೊಂಡಿದ್ದೆ. ಅದೇ ರೀತಿ ಇದ್ದೀನಿ ಕೂಡ. ಹಾಗಾಗಿ ಆ ಸಿರಿ ಜನರಿಗೆ ಇಷ್ಟವಾಗಿದ್ದರೂ ಪ್ರತಿವಾರ ನಾಮಿನೇಟ್ ಆದ್ರೂ ಸೇವ್ ಆಗ್ತಾ ಬಂದಿದ್ದೀನಿ. ಆ ಸಿರಿ ಕೂಡ ಜನರಿಗೆ ಇಷ್ಟವಾಗಿದಾಳೆ. ಎಲ್ಲರೂ ನನಗೆ ಸೇಫ್ ಜೋನಲ್ಲಿದ್ದಾರೆ ಎನ್ನುತ್ತಿದ್ದರು. ಆದರೆ ಅವರು ಸೇಫ್ ಜೋನಲ್ಲಿದ್ದು ನನಗೆ ಹೇಳ್ತಿದ್ರು ಅನಿಸತ್ತೆ. ನಾನು ನನ್ನ ಅಭಿಪ್ರಾಯ ಹೇಳುವಲ್ಲಿ ಯಾವತ್ತೂ ಹಿಂಜರಿದಿಲ್ಲ. ನಾನೂ ಪ್ರತಿವಾರ ನಾಮಿನೇಟ್ ಮಾಡ್ತಿದ್ದೆ. ಹಾಗಾಗಿ ಈ ಸೇಫ್ ಅನ್ನೋ ಮಾತನ್ನು ನಾನು ಒಪ್ಪಿಕೊಳ್ಳುವುದೇ ಇಲ್ಲ.