ಪುಷ್ಪ 2 ಸಿನಿಮಾದ ಪ್ರೀಮಿಯರ್ ವೇಳೆ ಹೈದರಾಬಾದ್ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಎ11 ಆರೋಪಿ ಆಗಿರೋ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಈಗ ಅವರು ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದಾರೆ. ಜೈಲಿನಿಂದ ಇಂದು ಮುಂಜಾನೆ ರಿಲೀಸ್ ಆದ ಅವರು, ಪೊಲೀಸ್ ಭಧ್ರತೆಯೊಂದಿಗೆ ನೇರವಾಗಿ ಮನೆಗೆ ಆಗಮಿಸಿದ್ದಾಎರ. ಇದೀಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದು ಕಾನೂನಿಗೆ ತಲೆ ಬಾಗೋದಾಗಿ ತಿಳಿಸಿದ್ದಾರೆ.
‘ಅಭಿಮಾನಿಗಳಿಗೆ ಧನ್ಯವಾದ. ನಾನು ಆರಾಮಗಿದ್ದೇನೆ. ಆ ಬಗ್ಗೆ ಚಿಂತಿಸೋದು ಬೇಡ. ನಾನು ಕಾನೂನನ್ನು ಗೌರವಿಸುತ್ತೇನೆ. ತನಿಖೆಗೆ ಸಹಕರಿಸುತ್ತೇನೆ’ ಎಂದು ಅಲ್ಲು ಅರ್ಜುನ್ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಮೃತಪಟ್ಟ ರೇವತಿ ಕುಟುಂಬದವರ ಬಗ್ಗೆ ಮಾತನಾಡಿದ ನಟ ‘ನಾನು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಸಿನಿಮಾ ನೋಡಲು ಹೋದಾಗ ಈ ಘಟನೆ ನಡೆಯಿತು. ಅದು ಅಚಾನಕ್ಕಾಗಿ ಆಗಿದ್ದು. ಅದೊಂದು ಅಪಘಾತ’ ಎಂದಿದ್ದಾರೆ.
‘ಆ ರೀತಿ ಮಾಡಬೇಕು ಎಂಬ ಯಾವುದೇ ಉದ್ದೇಶ ಇರಲಿಲ್ಲ. ಅವರ ಕುಟುಂಬಕ್ಕೆ ನಾನು ಕ್ಷಮೆ ಕೇಳುತ್ತೇನೆ. ಅದು ನನ್ನ ವೈಯಕ್ತಿಕ ನಿಯಂತ್ರಣದಲ್ಲಿ ಇರಲಿಲ್ಲ. ನಾನು ಕಳೆದ 20 ವರ್ಷಗಳಿಂದ ಅಲ್ಲಿಗೆ ಸಿನಿಮಾ ನೋಡಲು ಹೋಗುತ್ತಿದ್ದೇನೆ. ನನ್ನದು ಮಾತ್ರವಲ್ಲದೆ, ನನ್ನ ಅಂಕಲ್ ಸಿನಿಮಾಗಳನ್ನೂ ಅಲ್ಲಿ ನೋಡಿದ್ದೇನೆ. 30ಕ್ಕೂ ಹೆಚ್ಚು ಬಾರಿ ಆ ಥಿಯೇಟರ್ಗೆ ಭೇಟಿ ಕೊಟ್ಟಿದ್ದೇನೆ. ಯಾವಾಗಲೂ ಈ ರೀತಿ ಆಗಿರಲಿಲ್ಲ. ಸಾವಿನ ನಷ್ಟ ತುಂಬಲು ಸಾಧ್ಯವಿಲ್ಲ. ಆದರೆ, ನನ್ನ ಕೈಲಾದ ಸಹಾಯ ಮಾಡುತ್ತೇನೆ’ ಎಂದು ಅಲ್ಲು ಅರ್ಜುನ್ ಭರವಸೆ ನೀಡಿದ್ದಾರೆ.