ಬೆಂಗಳೂರು: ನೆಕ್ಲೆಸ್ (Necklace) ಧರಿಸಿದ ಫೋಟೋವನ್ನು ವಾಟ್ಸಪ್ ಡಿಪಿಗೆ (Whatsapp DP) ಹಾಕಿದ್ದರಿಂದ ಖತರ್ನಾಕ್ ಕಳ್ಳಿಯೊಬ್ಬಳು ಸಿಕ್ಕಿಬಿದ್ದಿದ್ದಾಳೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲದ ರೇಣುಕಾ (38) ಬಂಧಿತ ಆರೋಪಿ. ಹೆಚ್ಎಎಲ್ ಪೊಲೀಸರು ರೇಣುಕಾಳನ್ನು ಬಂಧಿಸಿ ಚಿನ್ನಾಭರಣವನ್ನು (Gold) ವಶಕ್ಕೆ ಪಡೆದಿದ್ದಾರೆ.
ಅಪಾರ್ಟ್ಮೆಂಟ್ಗಳಲ್ಲಿ ಶ್ರೀಮಂತರೇ ಇರುತ್ತಾರೆ. ಅವರು ಅಡುಗೆ ಮಾಡುವ ವ್ಯಕ್ತಿಗಳನ್ನು ಹುಡುಕುತ್ತಿರುತ್ತಾರೆ ಎಂದು ತಿಳಿದು ಆಕೆ ಅಪಾರ್ಟ್ಮೆಂಟ್ಗಳಲ್ಲಿ ಕೆಲಸ ಮಾಡಲು ಮುಂದಾಗುತ್ತಾಳೆ.
ಜೋಡಿ ಆಪ್ ನಲ್ಲಿ ಪರಿಚಯವಾದ ಪ್ರೇಯಸಿ: ಪ್ರಿಯಕರನಿಗೆ ಕಳ್ಳತನದ ಐಡಿಯಾ ಕೊಟ್ಟು ಪೊಲೀಸರಿಗೆ ಲಾಕ್
ರೇಣುಕಾ ಅಪಾರ್ಟ್ಮೆಂಟ್ ಬಳಿ ತೆರಳಿ, ನನಗೆ ಅಡುಗೆ ಮಾಡಲು ಬರುತ್ತದೆ. ದಕ್ಷಿಣ-ಉತ್ತರ ಭಾರತ ಸೇರಿದಂತೆ ಎಲ್ಲಾ ಶೈಲಿಯ ಅಡುಗೆ ಮಾಡುತ್ತೇನೆ. ಅಡುಗೆ ಮಾಡುವ ಕೆಲಸ ಇದ್ದರೆ ಹೇಳಿ ಎಂದು ಅಲ್ಲಿನ ಸೆಕ್ಯೂರಿಟಿ ಹತ್ತಿರ ಕೇಳುತ್ತಿದ್ದಳು.
ಸೆಕ್ಯೂರಿಟಿ ಗಾರ್ಡ್ ಅಪಾರ್ಟ್ಮೆಂಟ್ನಲ್ಲಿರುವ ಮಾಲೀಕರಿಗೆ ಈಕೆಯನ್ನು ಪರಿಚಯ ಮಾಡುತ್ತಿದ್ದರು. ಇದೇ ರೀತಿ ಕೆಲಸ ಕೇಳಿಕೊಂಡು ಮಾರತ್ತಳ್ಳಿ ಪೂರ್ವ ಪೌಂಟೇನ್ ಅಪಾರ್ಟ್ಮೆಂಟ್ನ ಎರಡು ಫ್ಲ್ಯಾಟ್ಗಳಲ್ಲಿ ಕೆಲಸಕ್ಕೆ ಸೇರಿದ್ದಳು. ಆ ಎರಡೂ ಮನೆಗಳಲ್ಲಿ ತನ್ನ ಕೈಚಳಕ ತೋರಿಸಿ ಸುಮಾರು 100 ಗ್ರಾಂ ಚಿನ್ನಾಭರಣ ಕದ್ದಿದ್ದಳು. ಚಿನ್ನದ ಆಸೆಗೆ ಕೆಲಸ ಮಾಡುತ್ತಿದ್ದ ಈಕೆ ಮನೆ ಒಡತಿಯ ತಾಳಿಯನ್ನೂ ಸಹ ದೋಚಿದ್ದಳು.
ಮನೆ ಮಾಲೀಕರು ಈಕೆಯ ಮೇಲೆ ಸಂಶಯ ವ್ಯಕ್ತಪಡಿಸಿ ಠಾಣೆಗೆ ದೂರು ನೀಡಿದ್ದರು. ಹೆಚ್ಎಎಲ್ ಪೊಲೀಸರು ಕರೆಸಿ ವಿಚಾರಣೆ ಮಾಡಿದಾಗ ನನಗೆ ಏನೂ ಗೊತ್ತಿಲ್ಲ ಎಂದು ನಾಟಕವಾಡಿದ್ದಳು. ಸಭ್ಯಸ್ಥಳಂತೆ ವರ್ತನೆ ತೋರಿದ್ದರಿಂದ ಆಕೆಯನ್ನು ವಿಚಾರಣೆ ಮಾಡಿ ಬಿಟ್ಟು ಕಳುಹಿಸಿದ್ದರು.
ನಾನು ಕಳ್ಳತನ ಮಾಡಿದರೂ ಸಿಕ್ಕಿಬೀಳುವುದಿಲ್ಲ ಎಂದು ಮನಗಂಡಿದ್ದ ಆಕೆ ಒಂದು ದಿನ ಕದ್ದ ನೆಕ್ಲೆಸ್ನ್ನು ಧರಿಸಿ ಪೋಟೋ ತೆಗೆದುಕೊಂಡು ತನ್ನ ವಾಟ್ಸಾಪ್ ಡಿಪಿಗೆ ಹಾಕಿಕೊಂಡಿದ್ದಳು.
ವಾಟ್ಸಪ್ ಡಿಪಿಯನ್ನು ಗಮನಿಸಿದ ಫ್ಲ್ಯಾಟ್ ಮಾಲೀಕರು ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸರು ಮತ್ತೆ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದೆ. ಪೊಲೀಸರು ಬಂಧಿತಳಿಂದ 80 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.