ಬೆಂಗಳೂರು : 2024ರಲ್ಲಿ ಒಳ್ಳೆಯ ಮಳೆ ಬೆಳೆ ಆಗಲಿ ಅಂತ ಪ್ರಾರ್ಥನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಸರ್ಕಾರದ ಕಾರ್ಯದರ್ಶಿಗಳಿಗೆ ಸಭೆ ನಡೆಸಿದ ಅವರು ಮಾತನಾಡಿದರು. ಮುಂಗಾರಿನಲ್ಲಿ ಒಳ್ಳೆ ಮಳೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ರಾಜ್ಯದಲ್ಲಿ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 35 ಸಾವಿರ ಕೋಟಿ ಬೆಳೆ ನಷ್ಟವಾಗಿದೆ. ಪ್ರಕೃತಿ ಸಹಾಯವಿಲ್ಲದಿದ್ದರೆ, ಸರ್ಕಾರ ಏನು ಪರಿಹಾರ ಕೊಟ್ಟರು ಸಾಕಾಗುವುದಿಲ್ಲ. ಹವಾಮಾನ ಬದಲಾವಣೆಯಿಂದಾಗಿ ಈ ವೈಪರಿತ್ಯ ಕಾಣುತ್ತಿದ್ದೇವೆ ಎಂದು ಬೇಸರಿಸಿದರು.
ಅಭಿವೃದ್ಧಿಗಾಗಿ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ
ರಾಜ್ಯದ ಜನರ ಅಭಿವೃದ್ಧಿಗಾಗಿ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಸರ್ಕಾರ ಆಡಳಿತ ವರ್ಗವನ್ನು ಆಯ್ಕೆ ಮಾಡಿದೆ. ಜನಪರ, ಸಮಾಜಮುಖಿ ಧೋರಣೆ ಇದ್ದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು, ಸಂವಿಧಾನದ ಆಶಯಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
2024 ರಾಜ್ಯಕ್ಕೆ ಆಶಾದಾಯಕವಾಗಿದೆ
ಸಂವಿಧಾನ ಅರಿತು ಅದರಂತೆ ನಡೆಯಬೇಕಿದೆ. ಈ ದಿಕ್ಕಿನಲ್ಲಿ ಪ್ರಯತ್ನ ಮಾಡೋಣ. ಜನರ ನಿರೀಕ್ಷೆ ಹುಸಿಯಾಗದ ರೀತಿ ಕೆಲಸ ಮಾಡೋಣ. 2024ನೇ ವರ್ಷಕ್ಕೆ ನಾವೆಲ್ಲರೂ ಕಾಲಿಡುತ್ತಿದ್ದು, ಈ ವರ್ಷ ರಾಜ್ಯಕ್ಕೆ ಆಶಾದಾಯಕವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.