ಬಾಂಗ್ಲಾದೇಶ ವಿರುದ್ಧ ನಡೆಯತ್ತಿರುವ ಮೊದಲನೇ ಟೆಸ್ಟ್ ಪಂದ್ಯದ ಆರಂಭಿಕ ದಿನ ಶತಕ ಸಿಡಿಸಿದ ಭಾರತ ತಂಡದ ಸ್ಪಿನ್ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್, ತಮ್ಮ ಬ್ಯಾಟಿಂಗ್ ಯಶಸ್ಸಿಗೆ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ಗುರುವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ, 144 ರನ್ಗಳಿಗೆ 6 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಎಂಟನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅಶ್ವಿನ್, 112 ಎಸೆತಗಳಲ್ಲಿ ಅಜೇಯ 102 ರನ್ಗಳನ್ನು ಗಳಿಸಿ ಭಾರತ ತಂಡವನ್ನು ಅಪಾಯದಿಂದ ಪಾರು ಮಾಡಿದರು.
ತವರು ಅಭಿಮಾನಿಗಳ ಎದುರು ಆಡುವುದು ಯಾವಾಗಲೂ ವಿಶೇಷ ಹಾಗೂ ನಾನು ತುಂಬಾ ಇಷ್ಟಪಡುವ ಕ್ರೀಡಾಂಗಣ ಇದಾಗಿದೆ. ಕೊನೆಯ ಬಾರಿ ನಾನು ಇಲ್ಲಿ ಶತಕವನ್ನು ಸಿಡಿಸಿದ್ದೆ, ಆಗ ನೀವು (ರವಿ ಶಾಸ್ತ್ರಿ) ನಮ್ಮ ಕೋಚ್. ಇದು ತುಂಬಾ ವಿಶೇಷವಾಗಿದೆ. ಟಿ20 ಟೂರ್ನಿಯಿಂದ ಇಲ್ಲಿಗೆ ಬಂದಿದ್ದು ತುಂಬಾ ನೆರವಾಗಿದೆ. ಬ್ಯಾಟಿಂಗ್ನಲ್ಲಿ ಹಲವು ಶಾಟ್ಸ್ ಮೇಲೆ ನಾನು ಕೆಲಸ ಮಾಡಿದ್ದೇನೆ,” ಎಂದು ಅಶ್ವಿನ್ ತಿಳಿಸಿದ್ದಾರೆ.
ಇಂಥಾ ಪಿಚ್ಗಳಲ್ಲಿ ನೀವು ರಿಷಭ್ ಪಂತ್ ರೀತಿ ಆಕ್ರಮಣಕಾರಿಯಾಗಿ ಬ್ಯಾಟ್ ಮಾಡಬೇಕಾಗುತ್ತದೆ. ಬೌನ್ಸ್ ಹಾಗೂ ಕ್ಯಾರಿಯಾಗುವ ವಿಷಯದಲ್ಲಿ ಇದು ಹಳೆಯ ಚೆನ್ನೈ ಸ್ಕೂಲ್ನ ಪಿಚ್ ರೀತಿ ಇದೆ. ಸ್ವಲ್ಪ ವಿಡ್ತ್ ಸಿಕ್ಕರೆ ಸಾಕು ನೀವು ದೊಡ್ಡ ಹೊಡೆತಕ್ಕೆ ಕೈ ಹಾಕಬಹುದು. ಬೌನ್ಸ್ ಮತ್ತು ಕ್ಯಾರಿ ಇದ್ದರೆ ಆಡಲು ನನಗೆ ತುಂಬಾ ಇಷ್ಟ. ಇಂದು (ಗುರುವಾರ) ನಾನು ನನ್ನ ಆಟವನ್ನು ಆನಂದಿಸಿದ್ದೇನೆ,” ಎಂದು ಅಶ್ವಿನ್ ಹೇಳಿದ್ದಾರೆ.