ಇದೀಗ ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ಭಾರತ ಮೂಲದ ರಚಿನ್ ರವೀಂದ್ರ ಶತಕ ಹೊಡೆದು ಮಿಂಚಿದ್ದರು.ಈ ಹಿಂದೆ ವೆಸ್ಟ್ ಇಂಡೀಸ್ ನ ಶಿವನಾರಾಯಣ್ ಚಂದ್ರಪಾಲ್ ಭಾರತದ ವಿರುದ್ಧ ನೆಲಕಚ್ಚಿ ಆಡುತ್ತಿದ್ದುದು ತಿಳಿದೇ ಇರುವ ಸಂಗತಿ.
ಹೌದು .. ಭಾರತ ತಂಡದ 2ನೇ ಇನ್ನಿಂಗ್ಸ್ ನಲ್ಲಿ ಮುಂಬೈ ಮೂಲದ ಕಿವೀಸ್ ಬೌಲರ್ ಎಜಾಝ್ ಯೂನಸ್ ಪಟೇಲ್ ಮಿಂಚುತ್ತಿದ್ದಾರೆ. 2021ರಲ್ಲಿ ವಾಂಖೆಡೆ ಟೆಸ್ಟ್ ನಲ್ಲಿ ಇನ್ನಿಂಗ್ಸ್ ಒಂದರಲ್ಲಿ ಎಲ್ಲಾ 10 ವಿಕೆಟ್ ಗಳನ್ನು ಪಡೆದು ಮಿಂಚಿದ್ದ ಈ ಪ್ರತಿಭಾವಂತ ಬೌಲರ್
ಈಗಾಗಲೇ 3ನೇ ದಿನಾಂತ್ಯಕ್ಕೆ ಭಾರತದ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಮೂರು ವಿಕೆಟ್ ಪತನಗೊಂಡಿದ್ದು ಅದರಲ್ಲಿ ಎರಡು ವಿಕೆಟ್ ಗಳನ್ನು ಇವರೇ ಕಿತ್ತಿದ್ದಾರೆ.
ಎಜಾಝ್ ಯೂನುಸ್ ಪಟೇಲ್ ಅವರು 1988ರ ಅಕ್ಟೋಬರ್ 21ರಂದು ಮುಂಬೈನಲ್ಲಿ ಜನಿಸಿದರು. ತಂದೆ ಯೂನುಸ್ ಪಟೇಲ್ ಅವರು ಉದ್ಯಮಿಯಾಗಿದ್ದರೆ, ತಾಯಿ ಶಹನಾಝ್ ಪಟೇಲ್ ಅವರು ಶಾಲಾ ಶಿಕ್ಷಕಿಯಾಗಿದ್ದರು. ತಂಝಿಲ್ ಪಟೇಲ್ ಮತ್ತು ಸನಾ ಪಟೇಲ್ ಎಂಬ ಇಬ್ಬರು ತಂಗಿಯರಿದ್ದಾರೆ.
ಎಜಾಝ್ ಅವರಿಗೆ 8 ವರ್ಷ ಇದ್ದಾಗಲೇ ಅವರ ಕುಟುಂಬ ನ್ಯೂಜಿಲೆಂಡ್ ಗೆ ಸ್ಥಳಾಂತರಗೊಂಡಿತು. ಹೀಗಾಗಿ ಇಜಾಸ್ ಅವರ ಶಿಕ್ಷಣ ಬಹುತೇಕ ನ್ಯೂಜಿಲೆಂಡ್ ನಲ್ಲೇ. ಅವರು ಮುಂಬೈನ ಗೋರೆಗಾವ್ ನಲ್ಲಿರುವ ಮೌಂಟ್ ಮೇರಿ ಸ್ಕೂಲ್ ನಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ನ್ಯೂಜಿಲೆಂಡ್ ಗೆ ತೆರಳಿದ ಬಳಿಕ ಸೆಂಟ್ರಲ್ ಆಕ್ಲಂಡ್ ನ ಅವೊಂಡೇಲ್ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ನಡೆಸಿದರು.
ನ್ಯೂಜಿಲೆಂಡ್ ನಲ್ಲಿ ಅವರ ಚಿಕ್ಕಪ್ಪ ಸಯೀದ್ ಪಟೇಲ್ ಅವರು ಸ್ಥಳೀಯ ಕ್ರಿಕೆಟ್ ಕ್ಬಬ್ ನಲ್ಲ ಕ್ರಿಕೆಟ್ ಕೋಚ್ ಆಗಿದ್ದರು. ಇಜಾಸ್ ಅವರು ಶಾಲಾ ತಂಡದಲ್ಲಿ ಚೆನ್ನಾಗಿ ಕ್ರಿಕೆಟ್ ಆಡುವುದನ್ನು ಗಮನಿಸಿದ ಅವರು ನ್ಯೂಲಿನ್ ಕ್ರಿಕೆಟ್ ಕ್ಲಬ್ ಗೆ ಸೇರಿಸಿದರು. ಇದೇ ಅವರು ವೃತ್ತಿಪರ ಕ್ರಿಕೆಟ್ ಗೆ ಕಾಲಿಟ್ಟ ಕ್ಷಣವಾಗಿತ್ತು. ಆಗಿನ್ನೂ ಅವರಿಗೆ 15 ವರ್ಷ.
ಎಳವೆಯಲ್ಲಿ ಅವರು ವೇಗದ ಬೌಲರ್ ಆಗಿದ್ದರು. ನ್ಯೂಜಿಲೆಂಡ್ ಅಂಡರ್ 19 ತಂಡಕ್ಕೆ ಕದ ತಟ್ಟಿ ವಿಫಲರಾಗಿದ್ದರು. ಈ ವೇಳೆ ನಿರಾಸೆಗೊಳಗಾಗಿದ್ದ ಎಜಾಝ್ ಗೆ ಸ್ಪಿನ್ನ್ ಬೌಲಿಂಗ್ ಮಾಡುವಂತೆ ಸಲಹೆ ನೀಡಿದ್ದು ನ್ಯೂಜಿಲೆಂಡ್ ತಂಡದ ಬೌಲಿಂಗ್ ನ ಆಧಾರ ಸ್ತಂಭವಾಗಿದ್ದ ಖ್ಯಾತ ಸ್ಪಿನ್ನರ್ ದೀಪಕ್ ಪಟೇಲ್ ಅವರು. ಅವರೇ ತರಬೇತಿ ಸಹ ನೀಡಿದರು.