ಮಂಗಳೂರು: ಹಳೆಯ ಸಿದ್ದರಾಮಯ್ಯ ಕಳೆದುಹೋಗಿದ್ದಾರೆ. ನಾನು ಅವರೊಂದಿಗೆ ಶಾಸಕನಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಆ ಸಿದ್ದರಾಮಯ್ಯ ಇವತ್ತು ಇಲ್ಲ. ಇಂದಿರುವ ಸಿದ್ದರಾಮಯ್ಯರ ಬಗ್ಗೆ ನನಗೆ ಒಂದು ರೀತಿ ಅನುಮಾನ ಉಂಟಾಗುತ್ತಿದೆ ಎಂದು ರೈಲ್ವೆ ಇಲಾಖೆಯ ಸಹಾಯಕ ಸಚಿವ ವಿ. ಸೋಮಣ್ಣ ವಿಷಾದ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದರು.
ಆ ಸಂದರ್ಭದಲ್ಲಿ, ಇತ್ತೀಚೆಗೆ ರಾಜ್ಯ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಸಿದ್ದರಾಮಯ್ಯನವರು ಹಳೆಯ ಸಿದ್ದರಾಮಯ್ಯ ಆಗಿ ಉಳಿದಿಲ್ಲ. ವಾಸ್ತವವನ್ನು ಯಾರೂ ಏನೂ ಮುಚ್ಚಿ ಹಾಕಲು ಆಗಲ್ಲ. ಬೇರೆಯವರ ಬಗ್ಗೆ ಏನಾಯ್ತು ಅಂದೊಕೊಳ್ಳುವುದರ ಬದಲು ಸಿದ್ದರಾಮಯ್ಯರು ಇವರೇನಾ ಎಂಬ ಸಂಶಯ ನನಗೆ ಮೂಡಲಾರಂಭಿಸಿದೆ. ಈಗ ಅವರು ತಮ್ಮ ವರ್ತನೆಯನ್ನು ತಿದ್ದಿಕೊಂಡರೆ, ಅವರು ಹಳೆಯ ಸಿದ್ದರಾಮಯ್ಯರೇ ಆಗುತ್ತಾರೆ’’ ಎಂದು ಹೇಳಿದರು. ವಾಲ್ಮೀಕಿ ನಿಗಮದ ಹಗರಣ ಹಾಗೂ ಮುಡಾ ಸೈಟು ಹಂಚಿಕೆ ವಿಚಾರದಲ್ಲಿ ನಡೆದಿರುವ ಹಗರಣಗಳ ಬಗ್ಗೆ ಮಾತನಾಡಿದ ಅವರು,
“ಬೆಕ್ಕು ತಾನು ಕಣ್ಣು ಮುಟ್ಟಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಎಂದು ಅಂದುಕೊಂಡ ಹಾಗೆ, ನಾವು ಮಾಡೋದು ಯಾರಿಗೂ ಗೊತ್ತಾಗಲ್ಲ ಎಂದು ಸರ್ಕಾರ ಕಣ್ಣು ಮುಚ್ಚಿಕೊಂಡು ತನ್ನ ಪಾಡಿಗೆ ತಾನು ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದರೆ ಜಗತ್ತಿಗೆ ಅದು ಗೊತ್ತಾಗುವುದಿಲ್ಲವೇ. ವಾಸ್ತವವನ್ನು ಯಾರೂ ಮುಚ್ಚಿಡಲು ಆಗಲ್ಲ. ಇಂಥ ವಿಚಾರಗಳಲ್ಲಿ ಸಿದ್ದರಾಮಯ್ಯನವರು ತೋರುತ್ತಿರುವ ವರ್ತನೆಗಳು ಅವರ ಮೇಲೆಯೇ ಅನುಮಾನ ಬರುವಂತೆ ಮಾಡುತ್ತಿವೆ’’ ಎಂದು ಹೇಳಿದರು.