ಹುಬ್ಬಳ್ಳಿ :– ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕಕ್ಕೆ ವಿ ಸೋಮಣ್ಣ ಬೇಸರ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಪಕ್ಷದಲ್ಲಿ ಅತೃಪ್ತಿ ಏನೇ ಇರಲಿ, ಬಹಿರಂಗ ಚರ್ಚೆ ಸಲ್ಲದು. ಮಾಜಿ ಸಚಿವ ಸೋಮಣ್ಣ ಬಂಡಾಯದ ಕುರಿತು ಹಾಗೂ ವಿಜಯೇಂದ್ರ ನೇಮಕದ ನಂತರ ಸೋಮಣ್ಣ ಅತೃಪ್ತಿಯ ಬಗ್ಗೆ ನನಗೆ ಮಾಹಿತಿ ಇಲ್ಲ. ಅದು ಏನೇ ಇದ್ದರೂ ಬಹಿರಂಗ ಚರ್ಚೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಸೋಮಣ್ಣ ಹೈಕಮಾಂಡ್ ಗೆ ದೂರು ನೀಡುತ್ತಿರುವ ಕುರಿತು ಮಾಹಿತಿ ಇಲ್ಲ. ನಿಮ್ಮ ಕುಂದು ಕೊರತೆಗಳು ಏನೇ ಇರಲಿ ಅದನ್ನು ರಾಷ್ಟ್ರೀಯ ಅಧ್ಯಕ್ಷರಿಗೆ ಗಮನಕ್ಕೆ ತರಲಿ ಅಥವಾ ಇತರ ರಾಷ್ಟ್ರೀಯ ನಾಯಕರಿಗೆ ಮಾಹಿತಿ ನೀಡಲಿ. ಮಾಧ್ಯಮದ ಮೂಲಕ ಇದನ್ನು ಚರ್ಚಿಸುವುದು ಒಳ್ಳೆಯದಲ್ಲ ಎಂದರು.
ಸೋಮಣ್ಣ ಪ್ರಮುಖ ನಾಯಕರು ವೈಯಕ್ತಿಕವಾಗಿಯೂ ಆತ್ಮೀಯರಾಗಿದ್ದು, ಅವರ ಜೊತೆ ಮಾತಾಡ್ತೇನೆ ಎಂದ ಅವರು, ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆವಿಚಾರದಲ್ಲಿ ಉತ್ತರ ಕರ್ನಾಟಕ ಕಡೆಗಣನೆ ವಿಚಾರವಾಗಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಅಂತ ಭಾಗ ಮಾಡಲು ಆಗಲ್ಲ. ಒಂದು ವ್ಯವಸ್ಥೆಯೊಳಗೆ ಈ ಪ್ರಕ್ರಿಯೆ ಮಾಡಿದ್ದೇವೆ. ಉತ್ತರ ಕರ್ನಾಟಕಕ್ಕೆ ಮೊದಲ ಆದ್ಯತೆ ಕೊಟ್ಟವರು ಬಿಜೆಪಿ ಎಂದು ಅವರು ಹೇಳಿದರು.