ಮಹೇಶ್ ಬಾಬು ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಕಾಂಬಿನೇಷನ್ ನಲ್ಲಿ ಈ ಮೊದಲು ತೆರೆಕಂಡ ‘ಅಥಡು’ ಹಾಗೂ ‘ಖಲೇಜಾ’ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಈ ಕಾರಣದಿಂದಲೇ ಗುಂಟೂರು ಖಾರಂ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ನಿರೀಕ್ಷೆ ಹುಸಿ ಆಗಿದೆ. ಸಿನಿಮಾ ಅಂದುಕೊಂಡ ರೀತಿಯಲ್ಲಿ ಸಕ್ಸಸ್ ಆಗಿಲ್ಲ. ಚಿತ್ರದ ವಿಫಲತೆಯನ್ನು ಯಾರೊಬ್ಬರೂ ನೇರವಾಗಿ ಹೇಳಿಲ್ಲ. ಆದರೆ ಚಿತ್ರದ ವಿಲನ್ ಜಗಪತಿ ಬಾಬು ನೇರವಾಗಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿರುವ ಜಗಪತಿ ಬಾಬು ಹಲವು ವಿಚಾರಗಳನ್ನು ನೇರವಾಗಿ ಹೇಳಿಕೊಳ್ಳುತ್ತಾರೆ. ಅವರು ‘ಗುಂಟೂರು ಖಾರಂ’ ಸೋಲಿನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಸಿನಿಮಾ ಇಷ್ಟವಾಗಿಲ್ಲ ಎಂದು ನೇರವಾಗಿ ಹೇಳಿರುವ ಅವರು, ಸಿನಿಮಾ ಶೂಟ್ ಮಾಡೋದು ಕೂಡ ಕಷ್ಟವಾಯ್ತು ಎಂದಿದ್ದಾರೆ.
‘ನನಗೆ ಮಹೇಶ್ ಬಾಬು ಜೊತೆ ಕೆಲಸ ಮಾಡೋದು ಎಂದರೆ ಇಷ್ಟ. ಆದರೆ, ಗುಂಟೂರು ಖಾರಂ ನನಗೆ ಖುಷಿ ನೀಡಿಲ್ಲ. ಆರಂಭದಲ್ಲಿ ಪಾತ್ರಗಳು ಸ್ಟ್ರಾಂಗ್ ಎನಿಸಿದ್ದವು. ಆದರೆ, ಬರುಬರುತ್ತಾ ಎಲ್ಲವೂ ಕಲಸು ಮೇಲೋಗರ ಆಯಿತು. ಕೊನೆಯಲ್ಲಿ ಸಿನಿಮಾ ಶೂಟಿಂಗ್ ಮುಗಿಸೋದೆ ಕಷ್ಟ ಆಯಿತು. ನಾನು ಏನು ಮಾಡಬೇಕೋ ಅದೆಲ್ಲವನ್ನೂ ಮಾಡಿದ್ದೇನೆ. ಈ ರೀತಿಯ ಸಿನಿಮಾಗಳಲ್ಲಿ ಇಂಥ ಅದ್ಭುತ ಕಾಂಬಿನೇಷನ್ ಮಿಸ್ ಮಾಡಿಕೊಳ್ಳಲು ನನಗೆ ಇಷ್ಟ ಇರಲಿಲ್ಲ’ ಎಂದು ಹೇಳಿದ್ದಾರೆ.
ಸದಾ ರಗಡ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಾರೆ ಜಗಪತಿ ಬಾಬು. ಆದರೆ, ಈ ಸಿನಿಮಾದಲ್ಲಿ ಅವರು ಅತೀ ಗಂಭೀರ ವಿಲನ್ ಆಗಿಯೇನು ಇರಲಿಲ್ಲ. ಅವರ ಪಾತ್ರ ಕೂಡ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿಲ್ಲ. ಸಿನಿಮಾ ರಿಲೀಸ್ ಆದ ಕೆಲವೇ ದಿನಗಳಲ್ಲಿ ಚಿತ್ರ ಒಟಿಟಿಯಲ್ಲಿ ಬಿಡುಗಡೆ ಆಗಿದೆ.